ನವದೆಹಲಿ: ಅಮೆರಿಕಾ ಜೊತೆ ಸಂಬಂಧ ಹಳಸಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡಲಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ. 6 ವರ್ಷಗಳ ಬಳಿಕ ಮೋದಿ ಚೀನಾಗೆ ಭೇಟಿ ನೀಡುತ್ತಿದ್ದಾರೆ.
ಒಂದೆಡೆ ರಷ್ಯಾ ಜೊತೆಗೆ ಆಪ್ತವಾಗಿರುವ ಭಾರತದ ಮೇಲೆ ಅಮೆರಿಕಾ ಕೆಂಡ ಕಾರುತ್ತಿದೆ. ಭಾರತದ ಮೇಲೆ ಸುಂಕದ ಬರೆ ಹಾಕುತ್ತಿದೆ. ಈ ನಡುವೆ ಮೋದಿ ಚೀನಾಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಆದರೆ ಮೋದಿ ಈ ಭೇಟಿಯ ಹಿಂದೆ ಕಾರಣವೂ ಇದೆ.
ಈ ತಿಂಗಳು ಚೀನಾದಲ್ಲಿ ನಡೆಯಲಿರುವ ಶಾಂಘೈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಚೀನಾ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಮೋದಿ ಮಾತ್ರವಲ್ಲ, ಘಟಾನುಘಟಿ ನಾಯಕರೂ ಬರಲಿದ್ದಾರೆ. 2020 ರಲ್ಲಿ ಗಲ್ವಾನ್ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧ ಕೊಂಚ ಹಳಸಿತ್ತು. ಇತ್ತೀಚೆಗೆ ಶೃಂಗ ಸಭೆ ನಿಮಿತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅದಾದ ಬಳಿಕ ವಿದೇಶಾಂಗ ಸಚಿವ ಜೈಶಂಕರ್ ಭೇಟಿ ನೀಡಿದ್ದರು.
ಇದೀಗ ಮೋದಿ ಚೀನಾ ಪ್ರವಾಸ ಮಾಡಲಿದ್ದಾರೆ. ಇದೇ ಶೃಂಗ ಸಭೆಗೆ ರಷ್ಯಾ ಅಧ್ಯಕ್ಷ ಪುಟಿನ್ ಕೂಡಾ ಆಗಮಿಸಲಿದ್ದಾರೆ. ಈ ವೇಳೆ ಮೋದಿ ಮತ್ತು ಪುಟಿನ್ ಮಾತುಕತೆ ನಡೆಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡುವ ಮೊದಲು ಆಗಸ್ಟ್ 30 ರಂದು ಜಪಾನ್ ಗೆ ಭೇಟಿ ನೀಡಲಿದ್ದಾರೆ.