ತಮಿಳುನಾಡು: ತಿರುಚಿರಾಪಳ್ಳಿ ಜಿಲ್ಲೆಯ ಕಟ್ಟೂರ್‌ನ 33 ವರ್ಷದ ಗೃಹಿಣಿಯೊಬ್ಬರು 300 ಲೀಟರ್‌ಗೂ ಹೆಚ್ಚು ಎದೆಹಾಲನ್ನು ದಾನ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಸೆಲ್ವ ಬೃಂಧಾ ಅವರು 22 ತಿಂಗಳ ಅವಧಿಯಲ್ಲಿ 300.17 ಲೀಟರ್ ಎದೆಹಾಲನ್ನು-ಏಪ್ರಿಲ್ 2023 ರಿಂದ ಫೆಬ್ರವರಿ 2025 ರವರೆಗೆ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ಹಾಲು ಬ್ಯಾಂಕ್‌ಗೆ ದಾನ ಮಾಡಿದ್ದಾರೆ. ಈ ಮೂಲಕ ಸಾವಿರಾರು ಅಕಾಲಿಕ ಮತ್ತು ತೀವ್ರ ಅನಾರೋಗ್ಯದ ಶಿಶುಗಳ ಉಳಿವಿಗಾಗಿ ಸಹಾಯ ಮಾಡಿದ್ದಾರೆ.
2023-24ರ ಅವಧಿಯಲ್ಲಿ ಬ್ಯಾಂಕ್ ಸಂಗ್ರಹಿಸಿದ ಒಟ್ಟು ಎದೆಹಾಲಿನ ಅರ್ಧದಷ್ಟು ಆಕೆಯ ಕೊಡುಗೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯಿಂದ ಪ್ರೇರಿತರಾಗಿ, ಬೃಂದಾ ಅವರ ನಿರಂತರ ಕೊಡುಗೆಗಳು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಎರಡರಲ್ಲೂ ಸ್ಥಾನ ಗಳಿಸಿವೆ.
ಆಕೆಯ ಅಸಾಧಾರಣ ಸೇವೆಯನ್ನು ಗುರುತಿಸಿ, MGMGH ಮಿಲ್ಕ್ ಬ್ಯಾಂಕ್‌ನ ಅಧಿಕಾರಿಗಳು ಆಗಸ್ಟ್ 7 ರಂದು ವಿಶ್ವ ಸ್ತನ್ಯಪಾನ ಸಪ್ತಾಹದ ಗೌರವಾರ್ಥವಾಗಿ ಅವರನ್ನು ಗೌರವಿಸಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.