ಇಸ್ಲಾಮಾಬಾದ್: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಸಹಾಯ ಹಸ್ತ ಚಾಚಿದ ಪಾಕಿಸ್ತಾನ ಇದೀಗ ಮುಜುಗರಕ್ಕೀಡಾಗಿದೆ.
ಹೌದು ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಭಾರತ ಸೇರಿದಂತೆ ಹಲವು ದೇಶಗಳು ನೆರವಿನ ಹಸ್ತ ಚಾಚಿದೆ. ಅವಧಿ ಮೀರಿದ ಪರಿಹಾರ ಪ್ಯಾಕೇಜ್ ರವಾನಿಸುವ ಮೂಲಕ ಪಾಕಿಸ್ತಾನವು ಜಗತ್ತಿನ ಎದುರು ಭಾರಿ ಮುಖಭಂಗಕ್ಕೊಳಗಾಗಿದೆ.
ಪಾಕಿಸ್ತಾನವೂ ಆಹಾರ ಸಾಮಾಗ್ರಿಗಳನ್ನೊಳಗೊಂಡ ಪರಿಹಾರ ಪ್ಯಾಕೇಜ್ ಅನ್ನು ಕಳುಹಿಸಿತ್ತು.
ಈ ಬಗ್ಗೆ ಫೋಟೊದೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಶ್ರೀಲಂಕಾದಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕ ಕಚೇರಿ, ಶ್ರೀಲಂಕಾದಲ್ಲಿರುವ ಸಹೋದರ–ಸಹೋದರಿಯರಿಗೆ ಪಾಕಿಸ್ತಾನವು ಸಹಾಯಹಸ್ತ ಚಾಚಿದೆ ಎಂದು ಬರೆದುಕೊಂಡಿತ್ತು. ಆದರೆ, ಫೋಟೊದಲ್ಲಿರುವ ಆಹಾರ ಪೊಟ್ಟಣದಲ್ಲಿ ಬಳಕೆಯ ಅವಧಿ(ಎಕ್ಸ್‌ಪೈರಿ ಡೇಟ್) 10/2024 ಎಂದು ನಮೂದಾಗಿರುವುದು ಎಲ್ಲರ ಗಮನ ಸೆಳೆದಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿತ್ತು. ಎಚ್ಚೆತ್ತ ರಾಜತಾಂತ್ರಿಕ ಕಚೇರಿ, ತಕ್ಷಣ ಪೋಸ್ಟ್ ಅನ್ನು ಅಳಿಸಿ ಹಾಕಿದೆ.
ಪರಿಹಾರ ಪ್ಯಾಕೇಜ್ ಅನ್ನು ಶ್ರೀಲಂಕಾಕ್ಕೆ ರವಾನಿಸಲು ಪಾಕಿಸ್ತಾನ ವಿಮಾನಕ್ಕೆ ತನ್ನ ವಾಯುಪ್ರದೇಶದ ಮೂಲಕ ಹಾದುಹೋಗಲು ಭಾರತ ಅನುವು ಮಾಡಿಕೊಟ್ಟಿತ್ತು.
ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ ಬಂಧು ಅಡಿಯಲ್ಲಿ ಭಾರತವು 53 ಟನ್ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದೆ. ಅದಲ್ಲದೆ ಐವರು ವೈದ್ಯರು ಸೇರಿದಂತೆ ಎನ್‌ಡಿಆರ್‌ಎಫ್‌ನ 80 ಮಂದಿಯ ತುಕಡಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಶ್ರೀಲಂಕಾಕ್ಕೆ ನೆರವು ನೀಡಿದೆ.