ಅಯೋಧ್ಯೆ: ರಾಮಮಂದಿರದಲ್ಲಿ ಮೊನ್ನೆ ಪ್ರಧಾನಿ ಮೋದಿ ಕೇಸರಿ ಧ್ವಜಾರೋಹಣ ಮಾಡಿದ್ದಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತಗಾದೆ ತೆಗೆದಿದ್ದಾರೆ. ಇದಕ್ಕೆ ಭಾರತ ತಿರುಗೇಟು ನೀಡಿದ್ದು ನಿಮ್ಮದು ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ಎಂದಿದೆ.
ಅಯೋಧ್ಯೆಯಲ್ಲಿ ಮೊನ್ನೆಯಷ್ಟೇ ರಘುವಂಶದ ಚಿಹ್ನೆಯುಳ್ಳ ಕೇಸರಿ ಧ್ವಜಾರೋಹಣವನ್ನು ಪ್ರಧಾನಿ ಮೋದಿ ನೆರವೇರಿಸಿದ್ದರು. ಈ ಘಟನೆ ಬಗ್ಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಪ್ರತಿಕ್ರಿಯಿಸಿದ್ದು, ಇದು ಭಾರತದಲ್ಲಿ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯ ಎಂದಿದೆ.
ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದೆಲ್ಲಾ ಹಲುಬಿಕೊಂಡಿದ್ದರು. ಅವರ ಹೇಳಿಕೆಗೆ ಭಾರತ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ.
ನಮ್ಮ ಆಂತರಿಕ ವಿಚಾರಗಳಲ್ಲಿ ತಲೆ ಹಾಕಲು ಬರಬೇಡಿ. ನಿಮ್ಮದು ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ಎಂದಿದೆ. ಪಾಕಿಸ್ತಾನದಲ್ಲೇ ಅಲ್ಪಸಂಖ್ಯಾತರ ಮೇಲೆ ಧರ್ಮಾಂಧರು ದಾಳಿ ನಡೆಸುವ ಸಾಕಷ್ಟು ಉದಾಹರಣೆಗಳಿವೆ. ಹಿಂದೂ ದೇವಾಲಯಗಳನ್ನು ನಾಶಪಡಿಸಿದ ಘಟನೆಗಳಾಗಿವೆ. ಧರ್ಮಾಂಧತೆಯಿಂದ ಭಯೋತ್ಪಾದನೆಗಿಳಿದಿದ್ದಾರೆ. ಇದರ ನಡುವೆ ಭಾರತಕ್ಕೆ ಧರ್ಮ ಸಹಿಷ್ಣುತೆ ಬಗ್ಗೆ ಪಾಕಿಸ್ತಾನ ಪಾಠ ಮಾಡಲು ಬರುತ್ತಿದೆ.