ನ್ಯೂಯಾರ್ಕ್: ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾಗೆ ಭಾರತ, ಚೀನಾ ಹಣಕಾಸಿನ ಸಹಾಯ ಮಾಡ್ತಿದೆ ಎಂದು ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ ಅದೇ ಹಾಡು ಹಾಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತದ ವಿರುದ್ಧ ಕಿಡಿ ಕಾರಿದ್ದಾರೆ. ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಸುಂಕದ ಮೇಲೆ ಸುಂಕ ಹಾಕಿದ್ದ ಟ್ರಂಪ್ ತಮ್ಮ ಬೇಳೆ ಬೇಯದೇ ಇದ್ದಾಗ ಮತ್ತೆ ಮೋದಿ ನನ್ನ ಸ್ನೇಹಿತ ಎಂದು ಹತ್ತಿರವಾಗಲು ಪ್ರಯತ್ನಿಸಿದ್ದರು.
ಇದೀಗ ಮತ್ತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಹಳೆಯ ರಾಗ ಹಾಡಿದ್ದಾರೆ. ಭಾರತ, ಚೀನಾ ಸೇರಿದಂತೆ ನ್ಯಾಟೋ ರಾಷ್ಟ್ರಗಳು ರಷ್ಯಾಕ್ಕೆ ಹಣ ಸಹಾಯ ಮಾಡ್ತಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಟ್ರಂಪ್ ಮಾತುಗಳು ಈಗಷ್ಟೇ ಮತ್ತೆ ಹಳಿಗೆ ಬರುತ್ತಿರುವ ಭಾರತ-ಅಮೆರಿಕಾ ಸಂಬಂಧವನ್ನು ಹದಗೆಡಿಸುವ ಸಾಧ್ಯತೆಯಿದೆ.
ಇನ್ನು, ಭಾರತ-ಪಾಕಿಸ್ತಾನ ಯುದ್ಧವನ್ನೂ ನಾನೇ ನಿಲ್ಲಿಸಿದ್ದು ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ನಾನು ಭಾರತ-ಪಾಕಿಸ್ತಾನ ಸೇರಿದಂತೆ ಒಟ್ಟು 7 ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಕೊಚ್ಚಿಕೊಂಡಿದ್ದಾರೆ. ಟ್ರಂಪ್ ಮಾತುಗಳಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಈ ವ್ಯಕ್ತಿ ಯಾಕೆ ಹೀಗಾಡ್ತಿದ್ದಾರೆ ಎಂದಿದ್ದಾರೆ. ಒಮ್ಮೆ ಭಾರತ ಸ್ನೇಹಿತ ಅನ್ನೋದು, ಇನ್ನೊಮ್ಮೆ ಭಾರತದ ವಿರುದ್ಧವೇ ಮಾತನಾಡೋದು ಮಾತ್ರ ಬಿಡಲ್ಲ ಎನಿಸುತ್ತದೆ ಎಂದಿದ್ದಾರೆ.