ಕಠ್ಮಂಡು: ಭಾರತ ವಿರೋಧಿ ನೀತಿ ತಳೆದಿರುವ ನೇಪಾಳ ಪ್ರಧಾನಿ ಕೆಪಿ ಒಲಿ ರಾಜೀನಾಮೆಗೆ ಆಡಳಿತಾರೂಢ ಪಕ್ಷದ ಕೆಲವು ಸಂಸದರು ದಂಗೆಯಿದ್ದಿರುವ ಬೆನ್ನಲ್ಲೇ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಮತ್ತು ರಾಷ್ಟ್ರಪತಿಗಳ ಭೇಟಿ ಹಲವು ಊಹಾಪೋಹಕ್ಕೆ ಕಾರಣವಾಗಿದೆ.
ನೇಪಾಳದ ಮಾಧ‍್ಯಮಗಳ ಪ್ರಕಾರ ಚೀನಾ ರಾಯಭಾರಿ ನೇಪಾಳದಲ್ಲಿ ಸರ್ಕಾರಕ್ಕೆ ಗಂಡಾಂತರ ಎದುರಾಗದಂತೆ ರಾಷ್ಟ್ರಪತಿ ಭವನದಲ್ಲಿ ಗುಟ್ಟಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದು ನೇಪಾಳದ ಶಿಷ್ಟಾಚಾರಗಳ ಉಲ್ಲಂಘನೆಯಾಗಿದೆ.
ಈ ಮೂಲಕ ಚೀನಾ ಪರವಾಗಿರುವ ಕೆಪಿ ಒಲಿ ಸರ್ಕಾರ ಉಳಿಸಿಕೊಳ್ಳಲು ಚೀನಾ ಹುನ್ನಾರ ನಡೆಸಿದ್ದು, ತೆರೆಮರೆಯಲ್ಲೇ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಅಲ್ಲದೆ, ನೇಪಾಳದ ಆಂತರಿಕ ವಿಚಾರಗಳಲ್ಲೂ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ಒಂದೆಡೆ ಭಾರತದ ಜತೆಗೆ ಗಲ್ವಾನ್ ಗಡಿಯಿಂದ ಹಿಂದೆ ಸರಿದಿರುವ ಚೀನಾ ಮತ್ತೊಂದೆಡೆ ನೇಪಾಳ ಜತೆಗೆ ಈ ಗುಟ್ಟು ಗುಟ್ಟಿನ ವ್ಯವಹಾರ ನಡೆಸುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.