ಇದ್ದಕ್ಕಿದ್ದಂತೆ ಎದೆನೋವು ಬಂದಾಗ ಈಗ ಎಲ್ಲರೂ ಗಾಬರಿಯಾಗುತ್ತಿದ್ದಾರೆ. ಹಾಗಾಗಿ ಅನಗತ್ಯ ಗಾಬರಿ ಬೇಡ. ಎದೆನೋವು ಮತ್ತು ಗ್ಯಾಸ್ಟ್ರಿಕ್ ಎದೆ ನೋವಿಗೂ ಇರುವ ವ್ಯತ್ಯಾಸವೇನು ತಿಳಿಯಿರಿ.
ಗ್ಯಾಸ್ಟ್ರಿಕ್ ನೋವು
ಗ್ಯಾಸ್ಟ್ರಿಕ್ ನಿಂದ ಎದೆನೋವು ಆಗುತ್ತಿದ್ದರೆ ಅನ್ನನಾಳದಿಂದ ಹೊಟ್ಟೆಯ ತನಕ ನೋವು ಬರಬಹುದು. ಜೊತೆಗೆ ಹುಳಿ ತೇಗು, ಬಾಯಿ ಹುಳಿ ಹುಳಿಯಾಗುವುದು ಇಲ್ಲವೇ ಹುಳಿ ಜೊಲ್ಲು ರಸ ಬರಬಹುದು. ಬೆವರು ಕಂಡುಬರುವುದಿಲ್ಲ.ಆಹಾರ ನುಂಗಲು ಕಷ್ಟವಾದರೆ ಅದು ಗ್ಯಾಸ್ಟ್ರಿಕ್ ಆಗಿರುತ್ತದೆ. ಹೊಟ್ಟೆಯ ಮೇಲ್ಭಾಗದಲ್ಲೂ ಗ್ಯಾಸ್ಟ್ರಿಕ್ ನಿಂದಾಗಿ ನೋವು ಬರಬಹುದು.
ಹೃದಯದ ಸಮಸ್ಯೆ ಲಕ್ಷಣಗಳು
ಹೃದಯದ ಸಮಸ್ಯೆಯಿಂದ ಬರುವ ಎದೆನೋವು ಎಂದರೆ ಎದೆ ಮೇಲೆ ಭಾರದ ವಸ್ತು ಇಟ್ಟಂತೆ ಅನುಭವವಾಗಬಹುದು. ಉಸಿರು ಕಟ್ಟಿದಂತಾಗುವುದು, ಎದೆ ಹಿಂಡಿದಂತಾಗುವುದು, ವಿಪರೀತ ಬೆವರು, ವಾಂತಿ ಹೃದಯದ ಸಮಸ್ಯೆಯಿಂದ ಬರುವ ಎದೆನೋವಾಗಿರುತ್ತದೆ. ಕೆಲವರಿಗೆ ಹೃದಯದ ಎಡಭಾಗದಲ್ಲೇ ನೋವು ಬರುವುದಿಲ್ಲ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲೂ ನೋವು ಬಂದು ವಾಂತಿಯಾಗುತ್ತದೆ. ವಾಂತಿ ಜೊತೆಗೆ ಬೆವರುತ್ತಿದ್ದರೆ ಇದು ಹೃದಯಾಘಾತದ ಲಕ್ಷಣವೆಂದು ತಿಳಿದುಕೊಳ್ಳಬೇಕು.
ಎಡ ಭಾಗದಲ್ಲಿ ನೋವಿನ ಜೊತೆಗೆ ದವಡೆ, ಕತ್ತು ಅಥವಾ ಎಡಭುಜ ಇಲ್ಲವೇ ಬೆನ್ನಿನ ಮೇಲ್ಭಾಗದಲ್ಲಿ ನೋವು ಬರುತ್ತದೆ. ನಡೆಯುವಾಗ, ಊಟ ಮಾಡಿದಾಗ ಏರು ಜಾಗದಲ್ಲಿ ನಡೆಯುವುದಾಗ ಎದೆ ಉರಿ, ಸುಸ್ತು ಬಂದರೆ ಹೃದಯದ ಸಮಸ್ಯೆಯಿದೆ ಎಂದೇ ಅರ್ಥ.
ಖ್ಯಾತ ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಕಾರ, ಕುಳಿತಿದ್ದಾಗ ಆರಾಮವಾಗಿದ್ದು ನಡೆಯುವಾಗ ನೋವು ಬರುತ್ತದೆ ಎಂದರೆ ಹೃದಯದ ಸಮಸ್ಯೆಯಿದೆ ಎಂದು ತಿಳಿದುಕೊಳ್ಳಬೇಕು. ನಡೆಯುವಾಗ ನೋವು ಬರುವುದು ಹೃದಯದ ಖಾಯಿಲೆ ಇದ್ದಾಗ ಮಾತ್ರ ಎನ್ನುತ್ತಾರೆ ಅವರು. ಇಂತಹ ಸಂದರ್ಭದಲ್ಲಿ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು.