Publish Date: Thu, 13 Aug 2020 (10:06 IST)
Updated Date: Thu, 13 Aug 2020 (10:07 IST)
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಹಿಂದೆ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡಾ ಇದೇ ಸಮಸ್ಯೆಯಿಂದ ಬಳಲಿದ್ದರು. ಆದರೆ ಅವರು ಕ್ಯಾನ್ಸರ್ ಗೆದ್ದು ಬಳಿಕ ಕ್ರಿಕೆಟ್ ಕಣಕ್ಕೆ ಮರಳಿದ್ದು ಈಗ ಇತಿಹಾಸ.
2011 ರ ವಿಶ್ವಕಪ್ ಸಂದರ್ಭದಲ್ಲಿ ಯುವಿಗೆ ಕ್ಯಾನ್ಸರ್ ಶುರುವಾಗಿತ್ತು. ಆಗ ಅನಾರೋಗ್ಯವಿದ್ದರೂ ಮುಚ್ಚಿಟ್ಟು ಅವರು ವಿಶ್ವಕಪ್ ಗೆಲುವಿನ ರೂವಾರಿಯಾದರು. ಆದರೆ ಆಗ ಅವರಿಗೆ ಮೊದಲ ಹಂತದಲ್ಲಿತ್ತಷ್ಟೇ. ಹೀಗಾಗಿ ತಕ್ಷಣವೇ ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆದಿದ್ದ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲುವು ಕಂಡಿದ್ದರು.
ಆದರೆ ಸಂಜಯ್ ದತ್ ರದ್ದು ಅಂತಹ ಪ್ರಕರಣವಲ್ಲ. ಅವರಿಗೆ ಈಗಾಗಲೇ ಕ್ಯಾನ್ಸರ್ ಮೂರನೇ ಹಂತದಲ್ಲಿದೆ. ವಿಶೇಷವೆಂದರೆ ಸಂಜಯ್ ತಾಯಿ ನರ್ಗಿಸ್ ಕೂಡಾ ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದರು. ಅವರಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಇತ್ತು. ಹೀಗಾಗಿಯೇ ಸಂಜು ಬಾಬ ಅಭಿಮಾನಿಗಳು ಆತಂಕದಲ್ಲಿದ್ದಾರೆ.