Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ಪ್ರತೀ ಬಾರಿ ನಾವೇ ಯಾಕೆ? ಎಂದು ಬೇಸರಿಸಿಕೊಂಡ ಆರ್ ಸಿಬಿ ಫ್ಯಾನ್ಸ್

WPL 2024 RCB

Krishnaveni K

ದೆಹಲಿ , ಸೋಮವಾರ, 11 ಮಾರ್ಚ್ 2024 (08:28 IST)
Photo Courtesy: Twitter
ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೀವ್ರ ಹಣಾಹಣಿ ನಡೆಸಿ ಕೊನೆಗೆ 1 ರನ್ ನಿಂದ ಪಂದ್ಯ ಸೋತಿತು. ಇದರ ಬಳಿಕ ಆರ್ ಸಿಬಿ ಫ್ಯಾನ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಜೆಮಿಮಾ ರೊಡ್ರಿಗಸ್ ಅದ್ಭುತ ಬ್ಯಾಟಿಂಗ್ (58) ನಿಂದಾಗಿ 20 ಓವರ್ ‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ ಮೊದಲು ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಂಡಿತು. ಸ್ಮೃತಿ 5 ರನ್ ಗಳಿಗೇ ಔಟಾದರು.

ಆದರೆ ಬಳಿಕ ಜೊತೆಯಾದ ಎಲ್ಸಿ ಪೆರ್ರಿ-ಸೊಫಿ ಮೊಲಿನೆಕ್ಸೊ ಚೇತರಿಕೆ ನೀಡಿದರು. ಎಲ್ಸಿ 49 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ರನೌಟ್ ಆಗಬೇಕಾಯಿತು. ಮೊಲಿನೆಕ್ಸೊ 33 ರನ್ ಗಳಿಸಿ ಔಟಾದರು. ಬಳಿಕ ನಡೆದಿದ್ದು ರಿಚಾ ಘೋಷ್ ಮ್ಯಾಜಿಕ್.

ಒಂದು ಹಂತದಲ್ಲಿ 11 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದ್ದ ಆರ್ ಸಿಬಿಗೆ ಇನ್ನು ಗೆಲುವು ಕಷ್ಟ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಪಂದ್ಯದ ಚಿತ್ರಣ ಬದಲಾಯಿಸಿದ್ದು ರಿಚಾ ಘೋಷ್. ಎಂದಿನಂತೆ ಬೀಡು ಬೀಸಾದ ಬ್ಯಾಟಿಂಗ್ ನಡೆಸಿದ ಅವರು ತಂಡವನ್ನು ಗೆಲುವಿನ ಹೊಸ್ತಿಲವರೆಗೂ ತಂದು ನಿಲ್ಲಿಸಿದ್ದರು. 29 ಎಸೆತಗಳಿಂದ 51 ರನ್ ಗಳಿಸಿದ್ದ ಅವರು ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ಎರಡನೇ ರನ್ ಕದಿಯಲೆತ್ನಿಸಿ ರನೌಟ್ ಆದರು. ಇದರಿಂದಾಗಿ ಆರ್ ಸಿಬಿ 1 ರನ್ ಗಳಿಂದ ಸೋತಿತು. ತಂಡವನ್ನು ಗೆಲ್ಲಿಸಲಾಗದೇ ರಿಚಾ ಮೈದಾನದಲ್ಲೇ ಕುಸಿದು ಕೂತರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಲಷ್ಟೇ ಶಕ್ತವಾಯಿತು.

ಆದರೆ ಈ ಸೋಲು ಆರ್ ಸಿಬಿ ಫ್ಯಾನ್ಸ್ ಗೆ ತೀವ್ರ ನಿರಾಸೆ ತಂದಿದೆ. ಪ್ರತೀ ಬಾರಿಯೂ ಇಂತಹ ಸೋಲು ಬರೀ ಆರ್ ಸಿಬಿಗೆ ಮಾತ್ರ ಯಾಕೆ? ಆರ್ ಸಿಬಿ ಯಾವ ಪರಿ ದುರದೃಷ್ಟ ಅಂಟಿಕೊಂಡಿದೆ ಎಂದು ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರೂ ಮಾದರಿಯಲ್ಲಿ ನಂ.1: ಟೀಂ ಇಂಡಿಯಾ ವಿಶ್ವದಾಖಲೆ