Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ಆರ್ ಸಿಬಿ ಕ್ವೀನ್ ಸ್ಮೃತಿ ಮಂಧಾನ ಅಬ್ಬರಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

Smriti Mandhana

Krishnaveni K

ಬೆಂಗಳೂರು , ಸೋಮವಾರ, 4 ಮಾರ್ಚ್ 2024 (21:02 IST)
Photo Courtesy: Twitter
ಬೆಂಗಳೂರು: ನಾಯಕಿ ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್ ನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯುಪಿಎಲ್ ಯ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ.

ಆರ್ ಸಿಬಿಯ ಲೇಡಿ ಕೊಹ್ಲಿ ಎಂಬ ಬಿರುದಿಗೆ ತಕ್ಕಂತೆ ಆಟವಾಡಿದ ಸ್ಮೃತಿ ಮಂಧಾನ ಇಂದು ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಒಟ್ಟು 50 ಎಸೆತ ಎದುರಿಸಿದ ಅವರು 80 ರನ್ ಗಳಿಸಿದರು. ಇದರಲ್ಲಿ 3 ಸಿಕ್ಸರ್, 10 ಬೌಂಡರಿ ಸೇರಿತ್ತು. ಡಬ್ಲ್ಯುಪಿಎಲ್ ನ ದುಬಾರಿ ಆಟಗಾರ್ತಿ ಸ್ಮೃತಿಗೆ ಇದು ಎರಡನೇ ಅರ್ಧಶತಕವಾಗಿದೆ. ಇದಕ್ಕೆ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಅರ್ಧಶತಕ ಸಿಡಿಸಿದ್ದರು. ಇದೀಗ ಮತ್ತೊಂದು ಭರ್ಜರಿ ಬ್ಯಾಟಿಂಗ್ ಬಂದಿದೆ. ಆರ್ ಸಿಬಿ ಅಭಿಮಾನಿಗಳು ಮೈದಾನಕ್ಕೆ ಲಗ್ಗೆಯಿಡುವುದೇ ಸ್ಮೃತಿ ಬ್ಯಾಟಿಂಗ್ ನೋಡಲು. ಇಂದು ಅಭಿಮಾನಿಗಳಿಗೆ ಸ್ಮೃತಿ ಭರಪೂರ ಮನರಂಜನೆ ಒದಗಿಸಿದರು.

ಸ್ಮೃತಿಗೆ ಉತ್ತಮ ಸಾಥ್ ನೀಡಿದ ಸಬ್ಬಿನೇನಿ ಮೇಘನಾ 28 ರನ್ ಗಳ ಕೊಡುಗೆ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 51 ರನ್ ಒಟ್ಟುಗೂಡಿಸಿತ್ತು. ಅದಾದ ಬಳಿಕ ಸ್ಮೃತಿಗೆ ಜೊತೆಯಾದ ಸ್ಟಾರ್ ಆಟಗಾರ್ತಿ ಎಲ್ಸಿ ಪೆರಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಂದು ಸ್ಮೃತಿ ಅಬ್ಬರ ನೋಡಿ ಡಬ್ಲ್ಯುಪಿಎಲ್ ಕೂಟದ ಮೊದಲ ಶತಕ ದಾಖಲಾಗಿಯೇ ಬಿಡುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎರಡನೇ ವಿಕೆಟ್ ಗೆ 95 ರನ್ ಜೊತೆಯಾಟವಾಗಿದ್ದಾಗ 80 ರನ್ ಗಳಿಸಿದ ಸ್ಮೃತಿ ಔಟಾಗಿ ನಿರಾಸೆ ಮೂಡಿಸಿದರು. ಹಾಗಿದ್ದರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಕ್ಕೆ ಮೈದಾನದಲ್ಲಿ ಪ್ರೇಕ್ಷಕರು ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು. ಜೊತೆಗೆ ಈ ಡಬ್ಲ್ಯುಪಿಎಲ್ ಕೂಟದಲ್ಲಿ 200 ರನ್ ಪೂರೈಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಸ್ಮೃತಿ ಬಳಿಕ ಆರ್ ಸಿಬಿ ಇನಿಂಗ್ಸ್ ಹೊಣೆ ಹೊತ್ತ ಎಲ್ಸಿ ಪೆರಿ 37 ಎಸೆತಗಳಿಂದ 58 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ರಿಚಾ ಘೋಷ್ 21 ರನ್ ಗಳ ಕೊಡುಗೆ ನೀಡಿದರು. ಆದರೆ ದುರದೃಷ್ಟವಶಾತ್ ಎಲ್ಸಿ ಕೊನೆಯ ಓವರ್ ನಲ್ಲಿ ಔಟಾಗಬೇಕಾಯಿತು. ಆದರೂ ಆರ್ ಸಿಬಿ ದೊಡ್ಡ ಮೊತ್ತ ಪೇರಿಸಲು ಈ ಅನುಭವಿಗಳ ಆಟ ನೆರವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2024: ಈ ಸಲ ಕಪ್ ನಮ್ದಾಗಬೇಕಾದರೆ ಇಂದು ಆರ್ ಸಿಬಿ ಗೆಲ್ಲಲೇಬೇಕು