Publish Date: Tue, 12 Dec 2023 (11:28 IST)
Updated Date: Tue, 12 Dec 2023 (11:30 IST)
ನವದೆಹಲಿ: ರಸ್ತೆ ಅಪಘಾತದಿಂದಾಗಿ ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವ ರಿಷಬ್ ಪಂತ್ ಮತ್ತೆ ಕಣಕ್ಕೆ ಮರಳಲು ಸಿದ್ಧರಾಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಮುಂಬರುವ ಐಪಿಎಲ್ ವೇಳೆ ಸಕ್ರಿಯ ಕ್ರಿಕೆಟ್ ಗೆ ಮರಳಬಹುದು ಎಂಬ ವಿಶ್ವಾಸವಿದೆ. ಇದಕ್ಕಾಗಿ ಅವರು ಈಗಾಗಲೇ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸೆಂಬರ್ 19 ರಂದು ನಡೆಯಲಿರುವ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಎಂಬ ವಿಚಾರದ ಬಗ್ಗೆ ಈಗಾಗಲೇ ಡೆಲ್ಲಿ ಮ್ಯಾನೇಜ್ ಮೆಂಟ್ ರಿಷಬ್ ಜೊತೆಗೂ ಚರ್ಚಿಸಿದೆ ಎನ್ನಲಾಗಿದೆ.
ಈ ನಡುವೆ ರಿಷಬ್ ಐಪಿಎಲ್ 2024 ರಲ್ಲಿ ತಂಡದ ನಾಯಕತ್ವ ವಹಿಸಬೇಕೇ ಎಂಬ ಬಗ್ಗೆ ಡೆಲ್ಲಿ ಅಂತಿಮ ನಿರ್ಧಾರಕ್ಕೆ ಬರುತ್ತಿದೆ. ಐಪಿಎಲ್ ವೇಳೆ ರಿಷಬ್ ಫಿಟ್ ಆಗುವ ನಿರೀಕ್ಷೆಯಿದೆ. ಹಾಗಿದ್ದರೂ ಸುದೀರ್ಘ ಅವಧಿವರೆಗೆ ಅವರಿಗೆ ಕೀಪಿಂಗ್ ಕಷ್ಟವಾಗಬಹುದು. ಹೀಗಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು.
ಒಂದು ವೇಳೆ ಅವರು ಪೂರ್ಣ ಪ್ರಮಾಣದಲ್ಲಿ ಕೀಪಿಂಗ್ ಕೂಡಾ ಮಾಡುವಷ್ಟು ಫಿಟ್ ಆದರೆ ರಿಷಬ್ ನಾಯಕರಾಗಿಯೇ ಕಣಕ್ಕಿಳಿಯಲಿದ್ದಾರೆ. ಇಲ್ಲದೇ ಹೋದಲ್ಲಿ ಅವರ ಮಾರ್ಗದರ್ಶನದಲ್ಲಿ ಇನ್ನೊಬ್ಬರು ನಾಯಕನ ಪಾತ್ರ ನಿಭಾಯಿಸಬೇಕಾಗುತ್ತದೆ.