Publish Date: Fri, 08 Dec 2023 (14:57 IST)
Updated Date: Fri, 08 Dec 2023 (14:59 IST)
ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಕೆಲವೇ ದಿನ ಬಾಕಿಯಿದ್ದು, ಎಲ್ಲಾ ಫ್ರಾಂಚೈಸಿಗಳೂ ತಮ್ಮ ತಂಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿವೆ.
ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂಡದ ನಾಯಕ ಯಾರು ಎಂಬುದನ್ನು ನಿರ್ಧರಿಸಿವೆ. ಅದರಂತೆ ಈ ಬಾರಿ ಐಪಿಎಲ್ ನಲ್ಲಿ ಒಟ್ಟು ಮೂರು ಫ್ರಾಂಚೈಸಿಗಳಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಅವು ಯಾವುವು ನೋಡೋಣ.
ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಗೂಡು ಸೇರಿಕೊಂಡಿದ್ದಾರೆ. ಹೀಗಾಗಿ ಗುಜರಾತ್ ನಾಯಕತ್ವ ಶುಬ್ಮನ್ ಗಿಲ್ ಪಾಲಾಗಿದೆ. ಗಿಲ್ ಗೆ ಐಪಿಎಲ್ ನಲ್ಲಿ ಇದು ಮೊದಲ ಬಾರಿಗೆ ನಾಯಕತ್ವ ಸಿಗುತ್ತಿರುವುದು ವಿಶೇಷ.
ಡೆಲ್ಲಿ ತಂಡಕ್ಕೆ ಕಳೆದ ಸೀಸನ್ ನಲ್ಲಿ ರಿಷಬ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ನಾಯಕರಾಗಿದ್ದರು. ಆದರೆ ಈಗ ರಿಷಬ್ ರಸ್ತೆ ಅಪಘಾತದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರೇ ತಂಡದ ನಾಯಕರಾಗಲಿದ್ದಾರೆ.
ಇನ್ನು, ಕೆಕೆಆರ್ ಕೂಡಾ ಕಳೆದ ಸೀಸನ್ ನಲ್ಲಿ ಶ್ರೇಯಸ್ ಅಯ್ಯರ್ ಗಾಯದಿಂದಾಗಿ ನಿತೀಶ್ ರಾಣಾ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು. ಆದರೆ ಈಗ ಅಯ್ಯರ್ ಮರಳಿದ್ದು, ಅವರೇ ಈ ಬಾರಿ ಮತ್ತೆ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.