ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದ ಬಳಿಕ ಕೈ ಕುಲುಕದೇ ಇರಲು ಟೀಂ ಇಂಡಿಯಾಗೆ ಐಡಿಯಾ ಕೊಟ್ಟಿದ್ದು ಯಾರು ಎಂಬುದು ಈಗ ಬಹಿರಂಗವಾಗಿದೆ.
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಜೊತೆ ಟೀಂ ಇಂಡಿಯಾ ಆಡುವುದು ಬಹುತೇಕರಿಗೆ ಇಷ್ಟವಿರಲಿಲ್ಲ. ಆದರೆ ಅನಿವಾರ್ಯವಾಗಿ ಬಹು ರಾಷ್ಟ್ರಗಳ ಟೂರ್ನಿಯಾಗಿರುವುದರಿಂದ ಭಾರತ ಒಪ್ಪಬೇಕಾಯಿತು. ಹಾಗಿದ್ದರೂ ಈ ಪಂದ್ಯ ಆಡುವುದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
ಆದರೆ ಪಂದ್ಯಕ್ಕೆ ಮೊದಲು ಮತ್ತು ನಂತರ ಪಾಕಿಸ್ತಾನ ಆಟಗಾರರ ಜೊತೆ ಕೈ ಕುಲುಕುವ ಶಿಷ್ಟಾಚಾರವನ್ನು ಭಾರತ ತಂಡ ಮಾಡಲಿಲ್ಲ. ಬದಲಾಗಿ ಪಾಕ್ ಆಟಗಾರರು ಮೈದಾನದಲ್ಲಿ ಕಾಯುತ್ತಿದ್ದರೆ ಟೀಂ ಇಂಡಿಯಾ ಆಟಗಾರರು ಅವರ ಮುಖಕ್ಕೆ ಹೊಡೆದಂತೆ ಡ್ರೆಸ್ಸಿಂಗ್ ರೂಂ ಬಾಗಿಲು ಹಾಕಿದ್ದರು.
ಅಷ್ಟಕ್ಕೂ ಟೀಂ ಇಂಡಿಯಾಗೆ ಈ ಐಡಿಯಾ ಕೊಟ್ಟಿದ್ದೇ ಮುಖ್ಯ ಕೋಚ್ ಗೌತಮ್ ಗಂಭೀರ್ ಎಂದು ತಿಳಿದುಬಂದಿದೆ. ಈ ಪಂದ್ಯಕ್ಕೆ ಮುನ್ನ ಗಂಭೀರ್ ಆಟಗಾರರಿಗೆ ಪವರ್ ಫುಲ್ ಭಾಷಣ ಮಾಡಿದ್ದರು. ಸೋಷಿಯಲ್ ಮೀಡಿಯಾ ಬಳಕೆ ಮಾಡಬೇಡಿ, ಹೊರಗಡೆ ಅಭಿಪ್ರಾಯಗಳಿಗೆ ಕಿವಿಗೊಡಬೇಡಿ. ನಿಮ್ಮ ಕರ್ತವ್ಯ ಭಾರತ ಕ್ಕೆ ಬೇಕಾಗಿ ಆಡುವುದಷ್ಟೇ. ಪಹಲ್ಗಾಮ್ ನಲ್ಲಿ ಏನು ನಡೆದಿತ್ತು ಎನ್ನುವುದನ್ನು ಮರೆಯಬೇಡಿ. ಶೇಕ್ ಹ್ಯಾಂಡ್ ಮಾಡಬೇಡಿ, ಮಾತನಾಡಬೇಡಿ. ಕೇವಲ ಮೈದಾನಕ್ಕಿಳಿದು ಭಾರತಕ್ಕಾಗಿ ಆಡಿ ಗೆದ್ದು ಬನ್ನಿ ಅಷ್ಟೇ ಎಂದು ಗಂಭೀರ್ ಸೂಚನೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಇದನ್ನೇ ಆಟಗಾರರು ಪಾಲಿಸಿದ್ದಾರೆ ಎಂದು ತಿಳಿದುಬಂದಿದೆ.