ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಿನ್ನೆ ಮನಸ್ಸಿಲ್ಲದ ಮನಸ್ಸಿನಿಂದ ಪಂದ್ಯವಾಡಿದ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿಗೆ ಇನ್ನಿಲ್ಲದಂತೆ ಅವಮಾನ ಮಾಡಿ ಮಾನ ಹರಾಜು ಹಾಕಿದೆ.
ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದರು. ಹಾಗಿದ್ದರೂ ಅನಿವಾರ್ಯವಾಗಿ ಭಾರತ ಈ ಪಂದ್ಯವನ್ನು ಆಡಬೇಕಾಗಿ ಬಂತು. ಆದರೆ ಈ ಪಂದ್ಯಕ್ಕೆ ಬಹುತೇಕರು ಬಹಿಷ್ಕಾರ ಹಾಕಿದ್ದರು. ಹೀಗಾಗಿ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಈ ಗೆಲುವನ್ನು ದೇಶಕ್ಕೇ ಸಮರ್ಪಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಎದುರಾಳಿಗಳ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಪಂದ್ಯಕ್ಕೆ ಮೊದಲು ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಪಾಕ್ ನಾಯಕನ ಕೈಕುಲುಕಲಿಲ್ಲ. ಪಂದ್ಯದ ಸಂದರ್ಭದಲ್ಲಿಯೂ ಅಪ್ಪಿತಪ್ಪಿಯೂ ಪಾಕ್ ಆಟಗಾರರನ್ನು ಮಾತನಾಡಿಸುವುದಿರಲಿ, ಕಣ್ಣೆತ್ತಿಯೂ ನೋಡಲಿಲ್ಲ. ಎದುರಾಳಿ ಒಬ್ಬ ಆಟಗಾರನಿದ್ದಾನೆ ಆತನನ್ನು ಔಟ್ ಮಾಡುವುದಷ್ಟೇ ಕೆಲಸ ಎನ್ನುವ ರೀತಿಯಲ್ಲಿ ಭಾರತೀಯರು ಆಟವಾಡಿದ್ದರು.
ಇದೂ ಸಾಲದೆಂಬಂತೆ ಗೆಲುವಿನ ರನ್ ಸಿಕ್ಸರ್ ಸಿಡಿಸಿದ ಬಳಿಕ ಸೂರ್ಯಕುಮಾರ್ ಯಾದವ್ ಸಹ ಆಟಗಾರ ಶಿವಂ ದುಬೆಯನ್ನು ಕರೆದುಕೊಂಡು ಸೀದಾ ಮೈದಾನ ತೊರೆದಿದ್ದಾರೆ. ಸಾಮಾನ್ಯವಾಗಿ ಎದುರಾಳಿ ಆಟಗಾರರಿಗೆ ಕೈಕುಲುಕಿ ಪೆವಿಲಿಯನ್ ಗೆ ತೆರಳುವುದು ಪದ್ಧತಿ. ಆದರೆ ಪಂದ್ಯ ಮುಗಿಯಿತು ಎಂದಾಗ ಕರ್ತವ್ಯ ಮುಗಿಸಿದವರಂತೆ ಎದುರಾಳಿಗಳ ಕಡೆಗೆ ತಿರುಗಿಯೂ ನೋಡದೇ ಪೆವಿಲಿಯನ್ ಗೆ ತೆರಳಿದ್ದಾರೆ. ಪಾಕ್ ಆಟಗಾರರು ಮಾತ್ರ ಮೈದಾನದಲ್ಲೇ ಟೀಂ ಇಂಡಿಯಾ ಆಟಗಾರರು ಕೈ ಕುಲುಕಲು ಬರಬಹುದು ಎಂದು ಮೈದಾನದಲ್ಲಿ ಕಾದು ನಿಂತಿದ್ದರು. ಆದರೆ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಬಾಗಿಲು ಬಂದ್ ಮಾಡಿ ಕುಳಿತಿದ್ದರು. ಪ್ರಶಸ್ತಿ ಸಮಾರಂಭದಲ್ಲಿ ಸೂರ್ಯಕುಮಾರ್ ಈ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿ ಗಾಯದ ಮೇಲೆ ಉಪ್ಪು ಸವರಿದರು.