ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಎದುರಾಳಿ ಆಟಗಾರರ ಕೈಕುಲುಕದೇ ಇದ್ದಿದ್ದು ಯಾಕೆ ಎಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಗೆ ಪತ್ರಕರ್ತರು ಪ್ರಶ್ನಿಸಿದ್ದು ಇದಕ್ಕೆ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ನಿನ್ನೆ ಪಂದ್ಯಕ್ಕೆ ಮೊದಲು ಟಾಸ್ ವೇಳೆಯೂ ಸೂರ್ಯ ಮತ್ತು ಪಾಕ್ ನಾಯಕ ಸಲ್ಮಾನ್ ಕೈಕುಲುಕಲಿಲ್ಲ. ಪಂದ್ಯ ಮುಗಿದ ಬಳಿಕ ಸಾಮಾನ್ಯವಾಗಿ ಯಾವುದೇ ತಂಡವಾದರೂ ಪರಸ್ಪರ ಕೈಕುಲುಕುವ ಸಂಪ್ರದಾಯವಿದೆ. ಆದರೆ ನಿನ್ನೆಯ ಪಂದ್ಯದ ಬಳಿಕ ಪಾಕ್ ಆಟಗಾರರು ಮೈದಾನದಲ್ಲಿ ಕಾಯುತ್ತಿದ್ದರೂ ಭಾರತೀಯ ಆಟಗಾರರು ಕೈಕುಲುಕಲು ಬಾರದೇ ಪೆವಿಲಿಯನ್ ಬಾಗಿಲು ಬಂದ್ ಮಾಡಿದ್ದರು.
ಇದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಗೆ ಪರ್ತಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ. ನೀವು ಯಾಕೆ ಪಾಕಿಸ್ತಾನ ಆಟಗಾರರ ಕೈ ಕುಲುಕಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೇನೂ ಸಮಸ್ಯೆಯಿಲ್ಲ. ಕೆಲವೊಂದು ವಿಚಾರಗಳು ಕ್ರೀಡಾ ಮನೋಭಾವಕ್ಕಿಂತ ದೇಶವೇ ದೊಡ್ಡದು ಎಂದಿರುತ್ತದೆ. ಇದೂ ಕೂಡಾ ಹಾಗೆಯೇ. ನಾನು ಪ್ರಶಸ್ತಿ ಸಮಾರಂಭದಲ್ಲೂ ಹೇಳಿದ್ದೇನೆ, ನಾವು ಪಹಲ್ಗಾಮ್ ದಾಳಿಯ ಸಂತ್ರಸ್ತರ ಜೊತೆಗಿದ್ದೇವೆ. ಭಾರತೀಯ ಸೇನೆ ಜೊತೆಗಿದ್ದೇವೆ. ಹೀಗಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.