ನವದೆಹಲಿ: ನಿನ್ನೆ ಪಾಕಿಸ್ತಾನ ಈ ವಿಶ್ವಕಪ್ ಕೂಟದಲ್ಲಿ ಸೆಮಿಫೈನಲ್ ನಿಂದ ಹೆಚ್ಚು ಕಡಿಮೆ ಹೊರಬಿದ್ದ ಹಿನ್ನಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕ್ ತಂಡಕ್ಕೆ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದರು.
ಬೈ ಬೈ ಪಾಕಿಸ್ತಾನ್, ತವರಿಗೆ ಸೇಫ್ ಆಗಿ ಹೋಗಿ ತಲುಪಿ ಎಂದು ಸೆಹ್ವಾಗ್ ಕಾಲೆಳೆದಿದ್ದರು. ಆದರೆ ಅವರ ಈ ಟ್ವೀಟ್ ಪಾಕ್ ಕ್ರಿಕೆಟ್ ಸಮರ್ಥಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ ಈಗ ಸೆಹ್ವಾಗ್ ಪಾಕ್ ಅಭಿಮಾನಿಗಳಿಗೆ ಸುದೀರ್ಘ ಟ್ವೀಟ್ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಭಾರತ ಹೊರಬಿದ್ದ ಬಳಿಕ ಪಾಕ ಅಭಿಮಾನಿಗಳ ಟ್ವೀಟ್ ನ ಸ್ಕ್ರೀನ್ ಶಾಟ್ ಫೋಟೋ ಪ್ರಕಟಿಸಿದ ಸೆಹ್ವಾಗ್, ನಿಮ್ಮ ಕ್ರಿಯೆಗೆ ತಮ್ಮ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಅದನ್ನು ಸ್ವೀಕರಿಸಲೂ ಸಿದ್ಧರಿರಬೇಕು ಎಂದಿದ್ದಾರೆ.
ಅಷ್ಟೇ ಅಲ್ಲ, ಅಂಕಿ ಅಂಶಗಳ ಸಮೇತ ಪಾಕ್ ಐಸಿಸಿ ವಿಶ್ವಕಪ್ ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದೆ ಎಂದೂ ವಿವರಣೆ ನೀಡಿದ್ದಾರೆ. 21 ನೇ ಶತಮಾನದಲ್ಲಿ ಪಾಕಿಸ್ತಾನ 6 ವಿಶ್ವಕಪ್ ಗಳ ಪೈಕಿ 2011 ರಲ್ಲಿ ಮಾತ್ರ ಸೆಮಿಫೈನಲ್ ವರೆಗೆ ತಲುಪಿತ್ತು. ಆದರೆ ಭಾರತ ಕೇವಲ 2007 ರಲ್ಲಿ ಮಾತ್ರ ಸೆಮಿಫೈನಲ್ ಗೇರಲು ವಿಫಲವಾಗಿದ್ದು, ಉಳಿದೆಲ್ಲಾ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿತ್ತು. ಈಗ ಪಾಕಿಸ್ತಾನ ಬಾಲ್ ಚೇಂಜ್ ಮಾಡಲಾಗಿದೆ ಎಂಬಿತ್ಯಾದಿ ಇಲ್ಲಸಲ್ಲದ ಆರೋಪಗಳನ್ನು ಐಸಿಸಿ, ಬಿಸಿಸಿಐ ಮೇಲೆ ಮಾಡುತ್ತಿದೆ. ಅವರ ಪ್ರಧಾನಿ ನಮ್ಮ ತಂಡ ಸೋತಾಗ ವ್ಯಂಗ್ಯ ಮಾಡುತ್ತಾರೆ. ಅವರ ಆಟಗಾರರು ಇಲ್ಲಿ ನಮ್ಮ ಸೈನಿಕರು ಕಾವಲು ಕಾಯುತ್ತಿರುವಾಗ ಚಹಾ ಕುಡಿಯುವ ಫೋಟೋಗಳನ್ನು ಹಾಕಿ ನಮ್ಮ ಸೈನಿಕರಿಗೆ ಅವಮಾನ ಮಾಡುತ್ತಾರೆ. ಪಿಸಿಬಿ ಮುಖ್ಯಸ್ಥರು ಕ್ಯಾಮರಾ ಮುಂದೆಯೇ ನಮ್ಮ ದೇಶವನ್ನು ಶತ್ರುಗಳು ಎನ್ನುತ್ತಾರೆ. ಅವರ ಈ ಧ್ವೇಷಕ್ಕೆ ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ನೀವು ಒಳ್ಳೆಯ ಹಾದಿಯಲ್ಲಿದ್ದರೆ ನಿಮಗೂ ಒಳ್ಳೆಯದೇ ಎದುರಾಗುತ್ತದೆ. ನೀವು ಕೆಟ್ಟದ್ದು ಮಾಡಿದ ಮೇಲೆ ನಿಮಗೂ ಅದೇ ಸಿಗೋದು ಎಂದು ಸೆಹ್ವಾಗ್ ಟ್ವೀಟ್ ಮೂಲಕವೇ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ಮಾತಿನ ಸಿಕ್ಸರ್ ಬಾರಿಸಿದ್ದಾರೆ.