ಬೆಂಗಳೂರು: ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ಕೊಹ್ಲಿ ಸದ್ಯಕ್ಕೆ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ ಎಂದು ಮೊಹಮ್ಮದ್ ಕೈಫ್ ಕಾರಣ ಸಹಿತ ವಿವರಿಸಿದ್ದಾರೆ.
ವಿರಾಟ್ ಕೊಹ್ಲಿ ಆರ್ ಸಿಬಿ ಕಮರ್ಷಿಯಲ್ ಒಪ್ಪಂದಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ. ಹೀಗಾಗಿ ಅವರು ಐಪಿಎಲ್ ಗೂ ವಿದಾಯ ಹೇಳಬಹುದು ಅಥವಾ ಆರ್ ಸಿಬಿಯಿಂದ ಹೊರಬರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಆದರೆ ಮೊಹಮ್ಮದ್ ಕೈಫ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ವಿರಾಟ್ ಹಾಗೆ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ನನ್ನ ಮೊದಲ ಮತ್ತು ಕೊನೆಯ ಪಂದ್ಯ ಆರ್ ಸಿಬಿ ಪರವಾಗಿಯೇ ಇರುತ್ತದೆ ಎಂದು ಪ್ರಾಮಿಸ್ ಮಾಡಿದ್ದರು. ಇದನ್ನು ಅವರು ಮುರಿಯಲ್ಲ. ಐಪಿಎಲ್ ನಲ್ಲಿ ಎರಡು ರೀತಿಯ ಒಪ್ಪಂದವಿರುತ್ತದೆ. ಒಂದು ಆಟಗಾರರ ಒಪ್ಪಂದ ಇನ್ನೊಂದು ಕಮರ್ಷಿಯಲ್ ಒಪ್ಪಂದ.
ಅವರು ಕಮರ್ಷಿಯಲ್ ಒಪ್ಪಂದಗಳಿಗೆ ಸಹಿ ಹಾಕದೇ ಇರುವುದಕ್ಕೂ ಕಾರಣವಿದೆ. ಆರ್ ಸಿಬಿ ತಂಡಕ್ಕೆ ಹೊಸ ಮಾಲಿಕರು ಬರಲಿದ್ದಾರೆ ಎಂಬ ಸುದ್ದಿಯಿದೆ. ಅವರು ಆರ್ ಸಿಬಿಯ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಬಹುಶಃ ಇದೇ ಕಾರಣಕ್ಕೆ ಕೊಹ್ಲಿ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿರಬಹುದು. ಹೊಸ ಮಾಲಿಕರು ಬಂದ ಬಳಿಕ ಒಪ್ಪಂದದ ಬಗ್ಗೆ ಹೊಸದಾಗಿ ಮಾತುಕತೆಯಿರುತ್ತದೆ. ಇದೇ ಕಾರಣಕ್ಕೆ ಅವರು ಕಾಯುತ್ತಿರಬಹುದು ಎಂದು ಕೈಫ್ ವಿವರಿಸಿದ್ದಾರೆ.