ನವದೆಹಲಿ: ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡುತ್ತಾರೆಂದು ಪ್ರೇಕ್ಷಕರು ದೆಹಲಿ ಮೈದಾನದಲ್ಲಿ ಕಿಕ್ಕಿರಿದು ಬಂದಿದ್ದೇ ಬಂತು. ದೇಶೀಯ ಪಂದ್ಯದಲ್ಲೂ ಕೊಹ್ಲಿ ವಿಫಲರಾಗಿದ್ದು ಬೌಲ್ಡ್ ಆದ ವಿಡಿಯೋ ಇಲ್ಲಿದೆ ನೋಡಿ.
ಇಂದು ಯಶ್ ಧುಲ್ ವಿಕೆಟ್ ಕಳೆದುಕೊಂಡ ಬಳಿಕ ದೆಹಲಿ ಪರ ಬ್ಯಾಟಿಂಗ್ ಗೆ ಬಂದ ಕೊಹ್ಲಿ ಕೇವಲ 6 ರನ್ ಗಳಿಸಿ ಹಿಮಾಂಶು ಸಾಂಗ್ವಾನ್ ಅದ್ಭುತ ಬೌಲಿಂಗ್ ನಲ್ಲಿ ಬೌಲ್ಡ್ ಔಟ್ ಆಗಿ ನಿರ್ಗಮಿಸಿದ್ದಾರೆ. ಅಲ್ಲಿಗೆ ದೇಶೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿದಂತಾಗಿದೆ.
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾರೆಂಬ ಕಾರಣಕ್ಕೆ ದೆಹಲಿ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದಿದ್ದರು. ಇಂದು ಕೊಹ್ಲಿ ಬ್ಯಾಟಿಂಗ್ ಗೆ ಬರುತ್ತಿದ್ದಂತೇ ಪ್ರೇಕ್ಷಕರು ಎದ್ದು ನಿಂತು ತಮ್ಮ ತವರಿನ ಸ್ಟಾರ್ ಆಟಗಾರನನ್ನು ಸ್ವಾಗತಿಸಿದ್ದರು.
ನಿನ್ನೆಯಿಂದ ಈ ರಣಜಿ ಪಂದ್ಯ ವಿಶ್ವದಾದ್ಯಂತ ಗಮನ ಸೆಳೆದಿದೆ. ಆದರೆ ತಮ್ಮ ಖ್ಯಾತಿಗೆ ತಕ್ಕ ಆಟವಾಡದೇ ಕೊಹ್ಲಿ ನಿರಾಸೆ ಮೂಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ ಬಳಿಕ ರೈಲ್ವೇಸ್ ಆಟಗಾರರ ಸಂಭ್ರಮ ಹೇಳತೀರದಾಗಿತ್ತು. ಇತ್ತೀಚೆಗಿನ ವರದಿ ಬಂದಾಗ ದೆಹಲಿ 4 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಸಂಕಷ್ಟದಲ್ಲಿದೆ. ರೈಲ್ವೇಸ್ ಮೊದಲ ಇನಿಂಗ್ಸ್ ನಲ್ಲಿ 241 ರನ್ ಗಳಿಸಿತ್ತು.