ಮುಂಬೈ: ವೈಯಕ್ತಿಕವಾಗಿ ವೈಮನಸ್ಯಗಳೇನೇ ಇರಲಿ, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನಿನ್ನೆ ಏಕದಿನ ವಿಶ್ವಕಪ್ ಗೆಲ್ಲುತ್ತಿದ್ದಂತೇ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಜೊತೆಗೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳಾ ಕ್ರಿಕೆಟ್ ನ್ನು ಹಲವು ವರ್ಷಗಳಿಂದ ಫಾಲೋ ಮಾಡುತ್ತಿದ್ದರೆ ಹರ್ಮನ್ ಮತ್ತು ಮಿಥಾಲಿ ರಾಜ್ ನಡುವಿನ ಸಂಘರ್ಷ ಗೊತ್ತಿರುತ್ತದೆ. ಈ ಹಿಂದೆ ಇಬ್ಬರ ನಡುವೆ ನಡೆದ ಜಗಳ ಮಹಿಳಾ ಕ್ರಿಕೆಟ್ ನಲ್ಲಿ ವಿವಾದವೆಬ್ಬಿಸಿತ್ತು. ಹರ್ಮನ್ ನಾಯಕಿಯಾದ ಬಳಿಕ ಮಿಥಾಲಿ ರಾಜ್ ರನ್ನು ಏಕಾ ಏಕಿ ಆಡುವ ಬಳಗದಿಂದ ಕೈ ಬಿಡಲಾಗಿತ್ತು. ಇದರ ವಿರುದ್ಧ ಮಿಥಾಲಿ ಬಹಿರಂಗವಾಗಿ ಸಿಡಿದೆದ್ದಿದ್ದರು. ಇದಕ್ಕೆಲ್ಲಾ ಕೋಚ್ ರಮೇಶ್ ಪೊವಾರ್ ಕುಮ್ಮಕ್ಕೂ ಕಾರಣ ಎನ್ನಲಾಗಿತ್ತು. ಹೀಗಾಗಿ ಮಿಥಾಲಿ ಈ ಇಬ್ಬರ ವಿರುದ್ಧವೂ ಸಿಟ್ಟಾಗಿದ್ದರು. ಇದಾದ ಬಳಿಕ ಮಿಥಾಲಿ ಮತ್ತು ಹರ್ಮನ್ ಪರಸ್ಪರ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಆದರೆ ಈ ಎಲ್ಲಾ ವಿವಾದಗಳೇನೇ ಇದ್ದರೂ ಹರ್ಮನ್ ನಿನ್ನೆ ಮಹಿಳಾ ಕ್ರಿಕೆಟ್ ಎಲ್ಲಾ ದಿಗ್ಗಜ ತಾರೆಯರನ್ನು ಮೈದಾನಕ್ಕೆ ಕರೆಸಿ ಟ್ರೋಫಿ ನೀಡಿ ಗೌರವಿಸುವಾಗ ಮಿಥಾಲಿಯನ್ನೂ ಮರೆಯಲಿಲ್ಲ.
ಮಿಥಾಲಿ ಕೈಗೂ ಟ್ರೋಫಿ ಕೊಟ್ಟ ಹರ್ಮನ್ ಎಲ್ಲರ ಜೊತೆ ಸಂಭ್ರಮಿಸಿದ್ದಾರೆ. ಅವರ ಈ ನಡುವಳಿಕೆಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈಯಕ್ತಿಕವಾಗಿ ಏನೇ ವೈಮನಸ್ಯಗಳಿರಲಿ, ಭಾರತ ಮಹಿಳಾ ಕ್ರಿಕೆಟ್ ಗೆ ಮಿಥಾಲಿ ಕೊಡುಗೆ ಅಪಾರ. ಅದನ್ನು ಗುರುತಿಸಿ ಹರ್ಮನ್ ಹಿರಿಯ ತಾರೆಯನ್ನು ಗೌರವಿಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.