ಹೈದರಾಬಾದ್: ಕರ್ನೂಲ್ ಬಸ್ ದುರಂತದ ಶಾಕ್ ಮಾಸುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ಭೀಕರ ಬಸ್ ದುರಂತ ಸಂಭವಿಸಿದೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವಲ್ಲಾ ಬಳಿಯ ಮಿರ್ಜಗುಡ್ಡದಲ್ಲಿ ಹೈದರಾಬಾದ್- ಬಿಜಾಪುರ ಹೆದ್ದಾರಿಯಲ್ಲಿ ಇಂದು ಬಸ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ 16 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಜಲ್ಲಿ ತುಂಬಿದ್ದಟ್ರಕ್ ಅತೀ ವೇಗದಲ್ಲಿ ಬಂದು ವಿರುದ್ಧ ದಿಕ್ಕಿನಿಂದ ಢಿಕ್ಕಿ ಹೊಡೆದಿದೆ. ಟ್ರಕ್ ಚಾಲಕನ ಅತಿಯಾದ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಲಾರಿಯಲ್ಲಿದ್ದ ಜಲ್ಲಿ ಕಲ್ಲುಗಳು ಬಸ್ ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದಿದ್ದರಿಂದ ಹೆಚ್ಚು ಅನಾಹುತವಾಗಿದೆ. ಜಲ್ಲಿಕಲ್ಲುಗಳ ಅಡಿಯಲ್ಲಿ ಹಲವು ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಂದು ವರ್ಷದ ಒಂದು ಮಗು ಸೇರಿದಂತೆ 11 ಮಹಿಳೆಯರು, 9 ಪುರುಷರು ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕನೂ ಮೃತಪಟ್ಟಿರುವುದಾಗಿ ವರದಿಯಾಗಿದೆ. ಒಟ್ಟು 24 ಮಂದಿ ಗಾಯಗೊಂಡಿದ್ದು ಈ ಪೈಕಿ 5 ಜನರ ಪರಿಸ್ಥಿತಿ ಗಂಭೀರವಾಗಿದೆ.