ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿಯನ್ನು ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಮಣಿಸಿ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಪ್ರಮುಖ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್ ಇದು ನನ್ನ ಗ್ರೌಂಡ್ ಎನ್ನುವ ಮೂಲಕ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ತಿರುಗೇಟು ನೀಡಿದರು.
ಆರ್‌ಸಿಬಿ ವಿರುದ್ಧ ಇನ್ನೂ 7 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ಕಳೆದುಕೊಂಡು 164ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು. ಇಂದು ನಡೆದ ಆರ್‌ಸಿಬಿ ವಿರುದ್ಧ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕನ್ನಡಿಗ ಕೆಎಲ್ ರಾಹುಲ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. 53 ಎಸೆತಗಳಲ್ಲಿ 93 ರನ್ ಗಳಿಸಿ ಅಜೇಯವಾಗಿ ಉಳಿದರು.
ಇನ್ನೂ ಆರ್‌ಸಿಬಿ ವಿರುದ್ಧ ಜಯ ಗಳಿಸುತ್ತಿದ್ದ ಹಾಗೇ ಬ್ಯಾಟಿನಿಂದ ನೆಲದ ಮೇಲೆ ಸರ್ಕಲ್ ಹಾಕಿ ನೆಲಕ್ಕೆ ಬಡಿದು, ಇದು ನನ್ನ ನೆಲ, ನಾನಾಡಿದ ಗ್ರೌಂಡ್ ಎಂದು ಸನ್ನೆ ಮೂಲಕನೇ ತಿರುಗೇಟನ್ನು ನೀಡಿದ್ದಾರೆ. ಸದ್ಯ ರಾಹುಲ್ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲವು ಅವಕಾಶಗಳಿದ್ದರು ಕನ್ನಡಿಗನಾದ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಪ್ರಾಂಚೈಸಿ ಖರೀದಿಸಲು ಮುಂದಾಗಲಿಲ್ಲ. ಅದಲ್ಲದೆ ರಾಹುಲ್ ಕೂಡಾ ತನಗೆ ತನ್ನ ತವರಿನ ಹೆಸರಿನಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇನ್ನೂ ಆರ್‌ಸಿಬಿ ಅಭಿಮಾನಿಗಳು ಪ್ರತಿ ಭಾರಿಯೂ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಕರೆಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಕೆಎಲ್ ರಾಹುಲ್ ಮೇಲೆ ಕನ್ನಡಿಗರಿಗೆ ಅಪಾರವಾದ ಪ್ರೀತಿಯಿದೆ. ಕಂಠೀರವ ಕ್ರೀಡಾಂಗಣದಲ್ಲಿ ಆಡಿ, ಇಂದು ಸ್ಟಾರ್ ಬ್ಯಾಟರ ಆಗಿರುವ ನಮ್ಮ ಮಣ್ಣಿನ ಮಗ ಆರ್‌ಸಿಬಿಗೆ ಬರಬೇಕೆಂಬುದು ಪ್ರತಿಯೊಬ್ಬ ಕನ್ನಡಿಗ ಆಸೆ.
ಆದರೆ ಈ ಬಾರಿಯೂ ಆರ್‌ಸಿಬಿ ಪ್ರಾಂಚೈಸಿ ಕನ್ನಡಿಗನನ್ನು ಕೈಬಿಟ್ಟಿದ್ದು ಬೇಸರ ತಂದುಕೊಟ್ಟಿತು. ಇದೀಗ ಆರ್‌ಸಿಬಿ ತವರಿನಲ್ಲೇ ಕನ್ನಡಿಗ ರಾಹುಲ್ ತಮ್ಮ ಆಕ್ರೋಶವನ್ನು ಬ್ಯಾಟಿಂಗ್ ಮೂಲಕನೇ ಆರ್‌ಸಿಬಿ ಪ್ರಾಂಚೈಸಿಗೆ ನೀಡಿದ್ದಾರೆ. ಸದ್ಯ ರಾಹುಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.