Publish Date: Mon, 05 Feb 2024 (15:15 IST)
Updated Date: Mon, 05 Feb 2024 (15:18 IST)
ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು 106 ರನ್ ಗಳ ಭರ್ಜರಿ ಅಂತರದಿಂದ ಗೆದ್ದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಜಾರಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯ ಗೆದ್ದ ಬೆನ್ನಲ್ಲೇ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡ ರೋಹಿತ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲೂ ಬಡ್ತಿ ಪಡೆದಿರುವುದು ಗಮನಾರ್ಹ.
ಭಾರತಕ್ಕೆ ಸಿಕ್ಕ ಅಂಕಗಳೆಷ್ಟು?
ಡಬ್ಲ್ಯುಟಿಸಿ ಟೂರ್ನಿಯಲ್ಲಿ 6 ಪಂದ್ಯಗಳ ಪೈಕಿ ಮೂರು ಗೆಲುವು ಪಡೆದಿರುವ ಟೀಂ ಇಂಡಿಯಾ 38 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾವಿದ್ದು, ಆ ತಂಡ 10 ಪಂದ್ಯಗಳಿಂದ 6 ಗೆಲುವು ಕಂಡಿದ್ದು 66 ಅಂಕ ಪಡೆದುಕೊಂಡಿದೆ.
ಇನ್ನು ಭಾರತದ ವಿರುದ್ಧ ಸೋತ ಇಂಗ್ಲೆಂಡ್ 8 ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 7 ಪಂದ್ಯಗಳ ಪೈಕಿ ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದು 21 ಅಂಕ ಹೊಂದಿದೆ. 2 ಪಂದ್ಯಗಳ ಪೈಕಿ ಎರಡನ್ನೂ ಸೋತಿರುವ ಶ್ರೀಲಂಕಾ ಕೊನೆಯ ಸ್ಥಾನದಲ್ಲಿದೆ.