ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಶುಬ್ಮನ್ ಗಿಲ್ ಎಂದಿನಂತೆ ಸೆಲೆಬ್ರೇಷನ್ ಮಾಡಿರಲಿಲ್ಲ.
ಸಾಮಾನ್ಯವಾಗಿ ಯಾವುದೇ ಫಾರ್ಮ್ಯಾಟ್ ಇರಲಿ, ಶತಕ ಸಿಡಿಸಿದಾಗ ಶುಬ್ಮನ್ ಗಿಲ್ ತಲೆ ಬಾಗಿ ನಮಿಸುತ್ತಾರೆ. ಅವರ ಈ ನಮಸ್ಕರಿಸುವ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆದರೆ ಸತತ ವೈಫಲ್ಯಗಳ ನಂತರ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಗಿಲ್ ಕಡೆಯಿಂದ ಯಾವುದೇ ಸೆಲೆಬ್ರೇಷನ್ ಬಂದಿರಲಿಲ್ಲ. ಇದಕ್ಕೆ ಕಾರಣವೇನೆಂದು ಅವರು ಪಂದ್ಯದ ನಂತರ ವಿವರಿಸಿದ್ದಾರೆ.
ಸೆಲೆಬ್ರೇಷನ್ ಯಾಕಿರಲಿಲ್ಲ ಎಂದು ಕಾರಣ ಹೇಳಿದ ಗಿಲ್
ಪಂದ್ಯದ ಬಳಿಕ ಕಾಮೆಂಟೇಟರ್ ಗಳ ಜೊತೆ ಮಾತುಕತೆ ವೇಳೆ ಎಂದಿನಂತೆ ಯಾಕೆ ಸೆಲೆಬ್ರೇಷನ್ ಮಾಡಲಿಲ್ಲ ಎಂಬ ಪ್ರಶ್ನೆ ಬಂತು. ಇದಕ್ಕೆ ಉತ್ತರಿಸಿದ ಗಿಲ್, ನಾನು ಶತಕವಷ್ಟೇ ಬಾರಿಸಿದ್ದೆ. ನನ್ನ ಕೆಲಸ ಪೂರ್ತಿಯಾಗಿಲ್ಲ ಎನಿಸಿತು. ಬಹುಶಃ ದ್ವಿಶತಕ ಗಳಿಸಿದ್ದರೆ ಆ ರೀತಿ ಸೆಲೆಬ್ರೇಟ್ ಮಾಡುತ್ತಿದ್ದೆ ಎಂದಿದ್ದಾರೆ.
ದ್ವಿತೀಯ ಇನಿಂಗ್ಸ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಗೆ ಬಂದಿದ್ದ ಗಿಲ್ 104 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ್ದರು. ಇದರಿಂದಾಗಿ ಭಾರತ ಎದುರಾಳಿಗೆ ಪೈಪೋಟಿಕರ ಗುರಿ ನೀಡಲು ಸಾಧ್ಯವಾಯಿತು.
ಗಾಯದ ಬಗ್ಗೆ ಅಪ್ ಡೇಟ್ ನೀಡಿದ ಗಿಲ್
ಇನ್ನು ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶುಬ್ಮನ್ ಗಿಲ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆ ಬಗ್ಗೆ ಮಾಹಿತಿ ನೀಡಿರುವ ಅವರು ಇಂಜಕ್ಷನ್ ತಗೊಂಡಿದ್ದೆ. ಸ್ವಲ್ಪ ನೋವಿದೆ. ಆದರೂ ಮೂರು-ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.