ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿ ಸಂಕಷ್ಟದಲ್ಲಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 497 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ಆರಂಭದಲ್ಲೇ ಆಫ್ರಿಕನ್ನರು ಎಡವಿದ್ದಾರೆ. ಆರಂಭಿಕ ಡೀನ್ ಎಲ್ಗರ್ ಶೂನ್ಯ ಸುತ್ತಿದರೆ ಕ್ವಿಂಟನ್ ಡಿ ಕಾಕ್ 4 ರನ್ ಗಳಿಗೆ ಪೆವಿಲಿಯನ್ ಗೆ ಮರಳಿದ್ದಾರೆ. ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ದಾರೆ.
ಭಾರತದ ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ 212, ಅಜಿಂಕ್ಯಾ ರೆಹಾನೆ 115 ಮತ್ತು ರವೀಂದ್ರ ಜಡೇಜಾ 51 ರನ್ ಗಳಿಸಿ ಔಟಾದರು. ಇನ್ನು ಕೊನೆಯಲ್ಲಿ ಬಂದ ವೇಗಿ ಉಮೇಶ್ ಯಾದವ್ 5 ಭರ್ಜರಿ ಸಿಕ್ಸರ್ ಗಳೊಂದಿಗೆ ಕೇವಲ 10 ಎಸೆತಗಳಲ್ಲಿ 30 ರನ್ ಗಳಿಸಿದ್ದು ವಿಶೇಷವಾಗಿತ್ತು.