ಬೆಂಗಳೂರು: ಡಬ್ಲ್ಯುಪಿಎಲ್ ಮೂರನೇ ಆವೃತ್ತಿಯ ಪಂದ್ಯಗಳು ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಇಂದು ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಬೆಂಗಳೂರಿನಲ್ಲಿ ಕಳೆದ ಬಾರಿಯೂ ಡಬ್ಲ್ಯುಪಿಎಲ್ ಪಂದ್ಯಗಳಿಗೆ ಸ್ಟೇಡಿಯಂ ಭರ್ತಿಯಾಗಿತ್ತು. ಆರ್ ಸಿಬಿ ಅಭಿಮಾನಿಗಳು ಕೇಳಬೇಕಾ? ಎಲ್ಲೇ ಹೋದರೂ ತಮ್ಮ ತಂಡಕ್ಕೆ ಬೆಂಬಲ ನೀಡಲು ಮೈದಾನಕ್ಕೆ ಬಂದೇ ಬರುತ್ತಾರೆ. ಹೀಗಿರುವಾಗ ತವರಿನಲ್ಲೇ ಪಂದ್ಯ ನಡೆಯುತ್ತಿದೆ ಎಂದಾಗ ಆರ್ ಸಿಬಿ ಹುಡುಗಿಯರಿಗೆ ಇಂದು ಉತ್ಸಾಹವೂ ಹೆಚ್ಚಿರುತ್ತದೆ.
ಆರ್ ಸಿಬಿ ವಡೋದರಾ ಮೈದಾನದಲ್ಲಿ ಆಡಿದ್ದ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಬಾರಿ ಆರ್ ಸಿಬಿ ಮತ್ತೊಮ್ಮೆ ಕಪ್ ಗೆಲ್ಲುವ ಫೇವರಿಟ್ ಆಗಿದೆ. ನಾಯಕಿ ಸ್ಮೃತಿ ಮಂಧನಾ, ರಿಚಾ ಘೋಷ್, ಎಲ್ಸಿಸ್ ಪೆರ್ರಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ.
ಹಾಗಿದ್ದರೂ ತವರಿನ ಪ್ರೇಕ್ಷಕರು ಇಂದು ಕನ್ನಡತಿ ಶ್ರೇಯಾಂಕ ಪಾಟೀಲ್ ರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಅತ್ತ ಮುಂಬೈ ಮೊದಲ ಪಂದ್ಯ ಸೋತರೂ ಕಳೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಹಳಿಗೆ ಬಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.