ವಡೋದರಾ: ಡಬ್ಲ್ಯುಪಿಎಲ್ ಇಂದಿನ ಪಂದ್ಯದಲ್ಲಿ ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಆರ್ ಸಿಬಿ ಗರ್ಲ್ಸ್ ತಾವು ಸ್ಟ್ರಾಂಗ್ ಟೀಂ ಎಂದು ಮತ್ತೊಮ್ಮೆ ನಿರೂಪಿಸಿದ್ದು ಎದುರಾಳಿಯನ್ನು 141 ರನ್ ಗಳಿಗೆ ಆಲೌಟ್ ಮಾಡಿದೆ. ಟೀಂ ಇಂಡಿಯಾ ಜೊತೆಗಾತಿ ಶಫಾಲಿ ವಿಕೆಟ್ ಕೀಳಲು ಪಕ್ಕಾ ಪ್ಲ್ಯಾನ್ ಮಾಡಿದ ಸ್ಮೃತಿ ಮಂಧನಾ ಸಕ್ಸಸ್ ಕಂಡರು.
ಇಂದು ಮತ್ತೊಮ್ಮೆ ಟಾಸ್ ಗೆದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ಕೆಲವು ಓವರ್ ಗಳ ಬಳಿಕ ಬೌಲರ್ ಗಳಿಗೆ ಸಹಾಯ ಸಿಗಬಹುದು ಎಂದು ಸ್ಮೃತಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅವರ ಆಯ್ಕೆ ಸರಿಯಾಗಿಯೇ ಇತ್ತು.
ಆರಂಭದಲ್ಲಿಯೇ ಶಫಾಲಿ ವರ್ಮರನ್ನು ರೇಣುಕಾ ಸಿಂಗ್ ಶೂನ್ಯಕ್ಕೆ ಔಟ್ ಮಾಡಿದರು. ಇದಕ್ಕೆ ನಾಯಕಿ ಸ್ಮೃತಿ ಮಂಧನಾ ಯೋಜನೆಯೂ ಕಾರಣವಾಗಿತ್ತು. ಟೀಂ ಇಂಡಿಯಾದಲ್ಲಿ ತಮ್ಮ ಜೊತೆ ಆರಂಭಿಕರಾಗಿ ಸಾಕಷ್ಟು ಪಂದ್ಯಗಳನ್ನಾಡಿರುವ ಶಫಾಲಿ ದೌರ್ಬಲ್ಯವೇನೆಂದು ಸ್ಮೃತಿಗೆ ಚೆನ್ನಾಗಿಯೇ ಅರಿವಿತ್ತು. ಅದಕ್ಕೆ ತಕ್ಕಂತೇ ಅವರು ಫೀಲ್ಡಿಂಗ್ ಸೆಟ್ ಮಾಡಿ ರೇಣುಕಾಗೆ ಬೌಲಿಂಗ್ ಮಾಡಲು ಸೂಚಿಸಿದ್ದರು. ಅದು ಫಲ ಕೊಟ್ಟಿತು.
ಅದಾದ ಬಳಿ ಜೆಮಿಮಾ ರೊಡ್ರಿಗಸ್ ಮಿಂಚಿನಂತೆ ಅಬ್ಬರದ ಬ್ಯಾಟಿಂಗ್ ನಡೆಸಿದರಾದರೂ 34 ರನ್ ಗಳಿಸಿ ಅವರೂ ಔಟಾದರು. ಬಳಿಕ ಬಂದ ಯಾವ ಡೆಲ್ಲಿ ಬ್ಯಾಟಿಗರೂ ಹೇಳಿಕೊಳ್ಳುವ ಆಟವಾಡಲಿಲ್ಲ. ಆರ್ ಸಿಬಿ ನಿಯಮಿತವಾಗಿ ವಿಕೆಟ್ ಕೀಳುತ್ತಾ ಸಾಗಿದ್ದರಿಂದ ಡೆಲ್ಲಿ ಒತ್ತಡಕ್ಕೊಳಗಾಯಿತು. ಅಂತಿಮವಾಗಿ ಡೆಲ್ಲಿ 19.3 ಓವರ್ ಗಳಲ್ಲಿ 141 ರನ್ ಗಳಿಗೆ ಆಲೌಟ್ ಆಯಿತು. ಆರ್ ಸಿಬಿ ಪರ ರೇಣುಕಾ ಸಿಂಗ್, ಜಾರ್ಜ್ ವಾರೆಹಾಂ ತಲಾ 3, ಏಕ್ತಾ ಬಿಷ್ತ್, ಕಿಮ್ ಗಾರ್ತ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.