ವಡೋದರಾ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇಂದು ಸಮಬಲರಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾ ಮುಖಿಯಾಗಲಿದೆ.
ಕಳೆದ ಎರಡೂ ಸೀಸನ್ ಗಳಲ್ಲಿ ಪ್ರಬಲ ತಂಡವೆಂಬ ಖ್ಯಾತಿ ಪಡೆದಿದ್ದು ಇವೆರಡೂ ತಂಡಗಳೇ. ಟೂರ್ನಿಯ ಆರಂಭದಿಂದ ಅಂತ್ಯದವರೆಗೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಆದರೆ ಕಳೆದ ಸೀಸನ್ ನಲ್ಲಿ ಮಾತ್ರ ಫೈನಲ್ ಹಂತದಲ್ಲಿ ಈ ಎರಡೂ ತಂಡಗಳು ಎಡವಿದ್ದವು. ಹಾಗಿದ್ದರೂ ಡಬ್ಲ್ಯುಪಿಎಲ್ ನ ಪ್ರಬಲ ತಂಡಗಳೆಂದರೆ ಡೆಲ್ಲಿ ಮತ್ತು ಮುಂಬೈ ಎಂದೇ ಹೇಳಬಹುದು.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಪರ ಕಳೆದ ಸೀಸನ್ ಗಳಲ್ಲಿ ಅಮೆಲಿಯಾ ಕೆರ್, ಹೀಲೇ ಮ್ಯಾಥ್ಯೂಸ್, ಸಿವರ್ ಬ್ರಂಟ್ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಬೌಲಿಂಗ್ ನಲ್ಲಿ ಭಾರತೀಯರೇ ಆಗಿರುವ ಪೂಜಾ ವಸ್ತ್ರಾಕರ್, ಸಜೀವನ್ ಸಜನಾ, ಸಾಯ್ಕಾ ಇಶಾಖೆ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ವತಃ ನಾಯಕಿ ಮೆಗ್ ಲ್ಯಾನಿಂಗ್ ಪ್ರಮುಖ ಬ್ಯಾಟಿಗ. ಕಳೆದ ಎರಡೂ ಸೀಸನ್ ಗಳಲ್ಲಿ ಸ್ವತಃ ಆಡಿ ತಂಡವನ್ನು ಮುನ್ನಡೆಸಿದವರು. ಅವರಿಗೆ ಓಪನರ್ ಆಗಿ ಸಾಥ್ ನೀಡುವವರು ಶಫಾಲಿ ವರ್ಮ. ಅವರು ಈಗ ಕೊಂಚ ಫಾರ್ಮ್ ಕಳೆದುಕೊಂಡಿದ್ದರೂ ಡಬ್ಲ್ಯುಪಿಎಲ್ ನಲ್ಲಿ ಮಿಂಚುವ ನಿರೀಕ್ಷೆಯಿದೆ. ಉಳಿದಂತೆ ಮಧ್ಯಮ ಕ್ರಮಾಂಕಕ್ಕೆ ಜೆಮಿಮಾ ರೊಡ್ರಿಗಸ್, ಅಲಿಸಾ ಕ್ಯಾಪ್ಸಿ ಮೇಲೆ ನಿರೀಕ್ಷೆಯಿದೆ. ಇನ್ನು ಮರಿಝನೆ ಕಪ್ ತಂಡದ ಪ್ರಮುಖ ಆಲ್ ರೌಂಡರ್. ಅವರು ಹೊಡೆಬಡಿಯ ಬ್ಯಾಟಿಂಗ್ ಗೂ ಸೈ, ಬೌಲಿಂಗ್ ಗೂ ಸೈ. ಹೀಗಾಗಿ ಡೆಲ್ಲಿ ಕೂಡಾ ಬಲಿಷ್ಠ ತಂಡವಾಗಿದೆ. ಈ ಎರಡು ಸಮಬಲರ ಹೋರಾಟ ರಾತ್ರಿ 7.30 ರಿಂದ ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.