ವಡೋದರಾ: ಡಬ್ಲ್ಯುಪಿಎಲ್ 3 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್ ಸಿಬಿ ರೋಚಕ ಗೆಲುವು ಕಂಡಿದೆ. ಸೋಲುತ್ತಿದ್ದ ಪಂದ್ಯವನ್ನು ಆರ್ ಸಿಬಿ ಗೆಲ್ಲಲು ಕಾರಣವಾಗಿದ್ದು ಈ ಇಬ್ಬರು ಆಟಗಾರ್ತಿಯರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 201 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ಉದಾಹರಣೆಯೇ ಇರಲಿಲ್ಲ. ಆದರೆ ಆರ್ ಸಿಬಿ 18.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು202 ರನ್ ಗಳಿಸುವ ಮೂಲಕ 6 ವಿಕೆಟ್ ಗಳ ಗೆಲುವು ಸಾಧಿಸಿ ಇತಿಹಾಸ ಬರೆಯಿತು. ಡಬ್ಲ್ಯುಪಿಎಲ್ ನಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಮಾಡಿತು.
ಇದಕ್ಕೆ ಕಾರಣವಾಗಿದ್ದು ರಿಚಾ ಘೋಷ್ ಮತ್ತು ಕನಿಕಾ ಅಹುಜಾ. ಒಂದು ಹಂತದಲ್ಲಿ 109 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಆರ್ ಸಿಬಿಗೆ ಬಲ ನೀಡಿದ್ದು ರಿಚಾ ಘೋಷ್ ಮತ್ತು ಕನಿಕಾ ಬ್ಯಾಟಿಂಗ್. ಇಬ್ಬರೂ 5 ನೇ ವಿಕೆಟ್ ಗೆ ಮುರಿಯದ 93 ರನ್ ಗಳ ಜೊತೆಯಾಟವಾಡಿದರು.
ಇದರಲ್ಲಿ ರಿಚಾ ಘೋಷ್ ಕೊಡುಗೆ ದೊಡ್ಡದು. ಒಟ್ಟು 27 ಎಸೆತ ಎದುರಿಸಿದ ರಿಚಾ 7 ಬೌಂಡರಿ, 4 ಸಿಕ್ಸರ್ ಗಳೊಂದಿಗೆ ಅಜೇಯ 64 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಕನಿಕಾ ಕೇವಲ 13 ಎಸೆತಗಳಲ್ಲಿ 30 ರನ್ ಸಿಡಿಸಿದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ ನಂಬಲಸಾಧ್ಯ ಗೆಲುವು ತನ್ನದಾಗಿಸಿಕೊಂಡಿತು.