Publish Date: Fri, 06 Mar 2026 (09:00 IST)
Updated Date: Fri, 06 Mar 2026 (09:03 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲೂ ವಿಫಲರಾದ ಅಭಿಷೇಕ್ ಶರ್ಮಾ ಬೇಕಿದ್ದಾಗಲೇ ಕೈ ಕೊಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅವರ ಹೀನಾಯ ದಾಖಲೆಗಳ ಪಟ್ಟಿ ಇಲ್ಲಿದೆ.
ಹೆಸರಿಗೆ ಅಬ್ಬರದ ಬ್ಯಾಟಿಗ, ಆದರೆ ಅಭಿಷೇಕ್ ಶರ್ಮಾ ಈ ಟಿ20 ವಿಶ್ವಕಪ್ ನಲ್ಲಂತೂ ಒಮ್ಮೆಯೂ ತಂಡದ ಪ್ರಯೋಜನಕ್ಕೆ ಬಂದಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕಳಪೆ ಸಾಧನೆ. ಇದರಿಂದಾಗಿ ತಂಡ ಬೇಗನೇ ಆರಂಭಿಕ ವಿಕೆಟ್ ಕಳೆದುಕೊಳ್ಳುವಂತಾಗಿದೆ.
ಕೇವಲ ರಾಷ್ಟ್ರೀಯ ತಂಡ ಮಾತ್ರವಲ್ಲ ಐಪಿಎಲ್ ನಲ್ಲೂ ಅವರದ್ದು ಮಹತ್ವದ ಪಂದ್ಯಗಳಲ್ಲಿ ಕೈಕೊಡುವ ಜಾಯಮಾನ ಕಂಡುಬಂದಿದೆ. ಐಪಿಎಲ್ ಫೈನಲ್ ನಲ್ಲಿ 5 ಎಸೆತಗಳಲ್ಲಿ 2 ರನ್ ಗಳಿಸಿ ಔಟಾಗಿದ್ದರು. ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ 4 ಎಸೆತಗಳಿಂದ 3 ರನ್ ಮತ್ತು ಇನ್ನೊಮ್ಮೆ 5 ಎಸೆತಗಳಿಂದ 12 ರನ್ ಗಳಿಸಿದ್ದರು.
ಇನ್ನು ರಾಷ್ಟ್ರೀಯ ತಂಡಕ್ಕೆ ಬರುವುದಾದರೆ ಏಷ್ಯಾ ಕಪ್ ಫೈನಲ್ ನಲ್ಲಿ ಕಳೆದ ಬಾರಿ ಪಾಕಿಸ್ತಾನ ವಿರುದ್ಧ 6 ಎಸೆತಗಳಿಂದ 5 ರನ್ ಗಳಿಸಿ ಔಟಾಗಿದ್ದರು. ಇದೇ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಶೂನ್ಯ, ವೆಸ್ಟ್ ಇಂಡೀಸ್ ವಿರುದ್ಧ ನಾಕೌಟ್ ಪಂದ್ಯದಲ್ಲಿ 11 ಎಸೆತಗಳಿಂದ 10 ರನ್ ಗಳಿಸಿ ಔಟಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲೂ 6 ಎಸೆತಗಳಲ್ಲಿ 9 ರನ್ ಗಳಿಸಿದ್ದಾರೆ. ಹೀಗಾಗಿ ಅವರೀಗ ತಂಡಕ್ಕೆ ಹೊರೆಯಾಗುತ್ತಿದ್ದಾರೆ ಎನ್ನಬಹುದು.