ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ಬಳಿಕ ಪಿಚ್ ಬಗ್ಗೆ ಭಾರೀ ಟೀಕೆ ಕೇಳಿಬರುತ್ತಿದೆ. ಇದರ ನಡುವೆ ಪಿಚ್ ಬಗ್ಗೆ ಸೌರವ್ ಗಂಗೂಲಿ ಹೇಳಿಕೆ ವೈರಲ್ ಆಗಿದೆ.
ಟೀಂ ಇಂಡಿಯಾ ಕೋಲ್ಕತ್ತಾಗೆ ಬಂದಿಳಿದ ತಕ್ಷಣ ಕೋಚ್ ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನನ್ನು ಕರೆಸಿಕೊಂಡು ತಮಗೆ ಬೇಕಾದಂತೆ ಸ್ಪಿನ್ ಪಿಚ್ ನಿರ್ಮಿಸಿಕೊಡುವಂತೆ ಆದೇಶಿಸಿದ್ದರು. ಗಂಭೀರ್ ಸಲಹೆಯಂತೆ ಕೋಚ್ ಪಿಚ್ ರೆಡಿ ಮಾಡಿದ್ದರು.
ಈ ಪಿಚ್ ನಲ್ಲಿ ಬ್ಯಾಟಿಗರಿಗೆ ಏನೂ ಇರಲಿಲ್ಲ. ಬಾಲ್ ವಿಪರೀತ ತಿರುವು ಪಡೆಯುತ್ತಿತ್ತು. ಪರಿಣಾಮ 100 ರನ್ ಕೂಡಾ ಬೃಹತ್ ಮೊತ್ತ ಎನಿಸುವಂತಾಗಿತ್ತು. ಎರಡೂವರೆ ದಿನಕ್ಕೇ ಪಂದ್ಯ ಮುಗಿದಿತ್ತು. ಇದಾದ ಬಳಿಕ ಪಿಚ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಇದಕ್ಕೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, ನಾವು ಬಯಸಿದಂತೇ ಉತ್ತಮ ಪಿಚ್ ನಿರ್ಮಿಸಿಕೊಟ್ಟಿದ್ದೆವು. ಅದಕ್ಕೆ ತಕ್ಕಂತೆ ಚೆನ್ನಾಗಿ ಆಡದೇ ಇದ್ದಿದ್ದರೆ ಹೀಗೇ ಆಗೋದು. ಟೀಂ ಮ್ಯಾನೇಜ್ ಮೆಂಟ್ ತಮಗೆ ಇಂತಹ ಪಿಚ್ ಬೇಕು ಎಂದು ಕೇಳಿತ್ತು. ಅದನ್ನು ಪರಿಗಣಿಸಿ ಪಿಚ್ ನಿರ್ಮಿಸಿದ್ದೆವು. ಹಾಗಂತ ಇದು ಬೆಸ್ಟ್ ಪಿಚ್ ಎಂದು ಹೇಳಲ್ಲ. ಆದರೆ ಭಾರತ ಚೆನ್ನಾಗಿ ಆಡಬೇಕಿತ್ತು ಎಂದಿದ್ದಾರೆ.
ಇನ್ನು, ಪಿಚ್ ಬಗ್ಗೆ ಕ್ಯುರೇಟರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು ಕೋಲ್ಕತ್ತಾ ಪಿಚ್ ಡ್ರೈ ಆಗಿತ್ತು ಎಂದಿದ್ದಾರೆ. ಹೀಗಾಗಿ ಪಿಚ್ ಗೆ ಕಳಪೆ ಎಂದು ರೇಟಿಂಗ್ ಕೊಡುವ ಸಾಧ್ಯತೆಯಿದೆ.