ದುಬೈ: ಪಾಕಿಸ್ತಾನದ ಆತಿಥ್ಯದಲ್ಲಿ ಫ್ರೆಬ್ರುವರಿ ಮತ್ತು ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಬ್ಯಾಟರ್ ಶ್ರೇಯಸ್ ಅವರಿಗೆ ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿ ಒಲಿದಿದೆ.
30 ವರ್ಷದ ಅಯ್ಯರ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 243 ರನ್ ಹೊಡೆದಿದ್ದರು. ಮಾರ್ಚ್ ತಿಂಗಳಲ್ಲಿ 3 ಪಂದ್ಯಗಳಿಂದ 57.33 ಸರಾಸರಿಯಲ್ಲಿ 172 ರನ್ ಗಳಿಸಿದ್ದರು.
ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಅವರು 98 ಎಸೆತಗಳಲ್ಲಿ 79 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ 65 ಎಸೆತಗಳಿಂದ 45 ರನ್ ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 62 ಎಸೆತಗಳಲ್ಲಿ 48 ರನ್ ಗಳಿಸಿ ಸ್ಥಿರ ಆಟ ಪ್ರದರ್ಶಿಸಿದ್ದರು.
.ಪ್ರಶಸ್ತಿಯ ರೇಸ್‌ನಲ್ಲಿ ನ್ಯೂಜಿಲೆಂಡ್‌ನ ಜೇಕಬ್ ಡಫಿ ಮತ್ತು ರಚಿನ್ ರವೀಂದ್ರ ಇದ್ದರು. ಅವರನ್ನು ಮೀರಿ ಶ್ರೇಯಸ್ ಅಯ್ಯರ್ ಪ್ರಶಸ್ತಿ ಗೆದ್ದರು. ಭಾರತ ಸತತ ಎರಡನೇ ತಿಂಗಳು ಈ ಗೌರವಕ್ಕೆ ಪಾತ್ರವಾಗಿದೆ. ಫೆಬ್ರುವರಿ ತಿಂಗಳಲ್ಲಿ ಶುಭಮನ್ ಗಿಲ್ ಈ ಪ್ರಶಸ್ತಿಗೆ ಪಾತ್ರರಾಗಿದ್ದರು.
ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನನ್ನನ್ನು ಹೆಸರಿಸಿರುವುದು ಸಂತಸ ಮೂಡಿಸಿದೆ. ಅದೂ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಿಂಗಳು ಈ ಗೌರವ ಒಲಿದಿರುವುದು ಎಂದಿಗೂ ಮರೆಯಲಾರೆ ಎಂದು ಅಯ್ಯರ್ ಅವರು ಪ್ರತಿಕ್ರಿಯಿಸಿದ್ದಾರೆ.