ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ತವರಿನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ.
ಪಂಜಾಬ್‌ನ ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕೆಕೆಆರ್ ತಂಡ ಈವರೆಗೆ ಆಡಿರುವ 6 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಪಂಜಾಬ್ ಕಿಂಗ್ಸ್ ಐದು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.
ಪಿಚ್ ಬ್ಯಾಟರ್‌ಗಳಿಗೆ ನೆರವಾಗುವಂತಿದೆ. ಈ ಹಿಂದೆ ಇಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಮೊದಲು ಆಡಿದ ತಂಡಗಳು 200ಕ್ಕಿಂತ ಹೆಚ್ಚಿನ ಮೊತ್ತ ಗಳಿಸುವಲ್ಲಿ ಯಶಸ್ವಿ ಆಗಿದ್ದವು. ಸದ್ಯ ಪಂಜಾಬ್ ಬೌಲರ್‌ಗಳ ವಿಶ್ವಾಸ ಕದಡಿದೆ.
ಕಳೆದ ಪಂದ್ಯದಲ್ಲಿ ಪ್ರಮುಖ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಗ್ಲೆನ್ಸ್ ಮ್ಯಾಕ್ಸ್‌ವೆಲ್ ಅವರಿಬ್ಬರು ಮಾಡಿದ ಒಟ್ಟು ಏಳು ಓವರುಗಳಲ್ಲಿ 96 ರನ್‌ಗಳು ಹರಿದುಬಂದಿದ್ದವು. ಚಾಹಲ್ ಈ ಬಾರಿಯ 5 ಪಂದ್ಯಗಳಲ್ಲಿ ಓವರಿಗೆ ಸರಾಸರಿ 11ರಂತೆ ರನ್ ಕೊಟ್ಟಿದ್ದಾರೆ.
ಇನ್ನೊಂದು ರೀತಿ ಇದು ತಂಡದ ಉಭಯಸಂಕಟಕ್ಕೂ ಕಾರಣವಾಗಿದೆ. ಇಲ್ಲಿ 220ರ ಆಸುಪಾಸಿನ ಮೊತ್ತ ಗಳಿಸಿದರೂ ಅದು ಸುರಕ್ಷಿತವೆನಿಸದು. ಸುನಿಲ್ ನಾರಾಯಣ್, ವೆಂಕಟೇಶ್ ಅಯ್ಯರ್ ಅಂಥ ಬೀಸಾಟವಾಡುವ ಆಟಗಾರರು ಕೆಕೆಆರ್ ತಂಡದಲ್ಲಿದ್ದಾರೆ.