ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕರಾಗಿ ಕಮ್ ಬ್ಯಾಕ್ ಮಾಡಿದ ರೋಹಿತ್ ಶರ್ಮಾಗೆ ಈಗ ಅಭಿಮಾನಿಗಳಿಂದ ಆಕ್ರೋಶ ಎದುರಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ತಮ್ಮ ಮಗನ ಜನನದ ನಿಮಿತ್ತ ಆಡಿರಲಿಲ್ಲ. ಹೀಗಾಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಭಾರತ ಕನಿಷ್ಠ ಮೊತ್ತಕ್ಕೆ ಔಟಾದರೂ ಬೌಲಿಂಗ್ ಮೂಲಕ ಬುಮ್ರಾ ತಂಡವನ್ನು ಅದ್ಭುತವಾಗಿ ಗೆಲುವಿನೆಡೆಗೆ ಕೊಂಡೊಯ್ದಿದ್ದರು.
ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ತಂಡಕ್ಕೆ ಬಂದಿದ್ದಾರೆ. ಆದರೆ ಅವರು ನಾಯಕರಾಗಿ ಬಂದ ಪಂದ್ಯದಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳ ಸಹನೆಯ ಕಟ್ಟೆಯೊಡೆದಿದೆ. ರೋಹಿತ್ ಶರ್ಮಾ ಯಾಕಾದ್ರೂ ತಂಡಕ್ಕೆ ವಾಪಸ್ ಬಂದ್ರೋ, ಬುಮ್ರಾ ಇದ್ದಾಗ ತಂಡ ಚೆನ್ನಾಗಿ ಆಡಿತ್ತು ಎಂದಿದ್ದಾರೆ.
ರೋಹಿತ್ ಮಗನನ್ನು ಆಡಿಸಿಕೊಂಡು ಮನೆಯಲ್ಲಿಯೇ ಇರಬಹುದಿತ್ತು. ಎಲ್ಲಾ ಪಂದ್ಯಗಳಿಗೂ ಬುಮ್ರಾನೇ ನಾಯಕರಾಗಬಹುದಿತ್ತು. ನಾಯಕತ್ವದಲ್ಲೂ ಕಳಪೆ, ಬ್ಯಾಟಿಂಗ್ ನಲ್ಲೂ ಕಳಪೆ. ರೋಹಿತ್ ಇನ್ನು ನಿವೃತ್ತಿಯಾಗುವುದು ಉತ್ತಮ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಕಳೆದ 12 ಟೆಸ್ಟ್ ಇನಿಂಗ್ಸ್ ಗಳಿಂದ ಗಳಿಸಿದ್ದು ಕೇವಲ 142 ರನ್. ಅದೂ 12 ರ ಸರಾಸರಿಯಲ್ಲಿ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಶತಕ ಸಿಡಿಸಿ ಕಾಲವೇ ಆಗಿದೆ.