ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಥರ್ಡ್ ಅಂಪಾಯರ್ ಪ್ರಮಾದದಿಂದ ಭಾರತ ಅನ್ಯಾಯವಾಗಿ ಒಂದು ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 180 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿರುವ ಆಸ್ಟ್ರೇಲಿಯಾ ಇಂದು ಚಹಾ ವಿರಾಮದ ವೇಳೆಗೆ 184 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ. ಆದರೆ ಮಿಚೆಲ್ ಮಾರ್ಷ್ ವಿರುದ್ಧ ಅಂಪಾಯರ್ ನೀಡಿದ ತಪ್ಪು ತೀರ್ಪು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಮಿಚೆಲ್ ಮಾರ್ಷ್ ಬ್ಯಾಟ್ ಮತ್ತು ಪ್ಯಾಡ್ ಸವರಿಕೊಂಡಂತೆ ಚೆಂಡು ಹೋಗಿದೆ. ಭಾರತೀಯ ಆಟಗಾರರು ಅಪೀಲ್ ಮಾಡಿದಾಗ ಮೈದಾನದ ಅಂಪಾಯರ್ ಥರ್ಡ್ ಆಂಪಾಯರ್ ಸಲಹೆ ಕೇಳಿದ್ದಾರೆ. ಈ ವೇಳೆ ಕೇವಲ ಸ್ನಿಕೋ ಮೀಟರ್ ಮಾತ್ರ ನೋಡಿ ನಾಟೌಟ್ ತೀರ್ಪು ನೀಡಿದ್ದಾರೆ. ಆದರೆ ಚೆಂಡು ಮೊದಲು ಪ್ಯಾಡ್ ಗೆ ತಾಗಿ ಆ ಬಳಿಕ ಬ್ಯಾಟ್ ಸವರಿ ಕೊಂಡು ಹೋಗಿತ್ತು.
ಅಂಪಾಯರ್ ಸರಿಯಾಗಿ ಪರಾಮರ್ಶಿಸದೇ ನಾಟೌಟ್ ತೀರ್ಪು ನೀಡಿದ್ದರಿಂದ ಭಾರತಕ್ಕೆ ವಿಕೆಟ್ ಸಿಗದೇ ಹೋಯಿತು. ಜೊತೆಗೆ ಅನ್ಯಾಯವಾಗಿ ಒಂದು ಡಿಆರ್ ಎಸ್ ಕೂಡಾ ನಷ್ಟವಾಗಿದೆ. ಇದರ ವಿರುದ್ಧ ವಿರಾಟ್ ಕೊಹ್ಲಿ ಮೈದಾನದಲ್ಲಿದ್ದ ಅಂಪಾಯರ್ ನನ್ನು ಪ್ರಶ್ನೆ ಮಾಡಿದ್ದಾರೆ. ಪರ್ತ್ ನಲ್ಲಿ ಇದೇ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಗೆ ಔಟ್ ನೀಡಿದ್ದಿರಿ. ಇಲ್ಲಿ ಯಾಕೆ ನಾಟೌಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮೈದಾನದ ಅಂಪಾಯರ್ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ.