ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಇಂದು ಔಟಲ್ಲದಿದ್ದರೂ ಮೈದಾನದಿಂದ ಹೊರನಡೆದರು. ಬಳಿಕ ಅಂಪಾಯರ್ ತಡೆದು ನಿಲ್ಲಿಸಿದರು.
ಮೊದಲ ಟೆಸ್ಟ್ ನಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲೂ ರಾಹುಲ್ ರನ್ನು ಓಪನರ್ ಆಗಿ ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲೂ ರಾಹುಲ್ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಮನಗಂಡ ಆಸಿಸ್ ನಾಯಕ ಪ್ಯಾಟ್ ಕುಮಿನ್ಸ್ ಬೊಲ್ಯಾಂಡ್ ರನ್ನು ದಾಳಿಗಿಳಿಸಿದರು.
ಬೊಲ್ಯಾಂಡ್ ಎಸೆತದಲ್ಲಿ ರಾಹುಲ್ ಎರಡು ಬಾರಿ ಜೀವದಾನ ಪಡೆದರು. ಮೊದಲ ಎಸೆತದಲ್ಲಿ ರಾಹುಲ್ ಕೀಪರ್ ಗೆ ಕೈಗೆ ಕ್ಯಾಚಿತ್ತರು. ಆಸೀಸ್ ಆಟಗಾರರು ಸಂಭ್ರಮಿಸುತ್ತಿದ್ದರೆ ಇತ್ತ ರಾಹುಲ್ ಔಟಾದೆನೆಂದು ತಿಳಿದು ಪೆವಿಲಿಯನ್ ನತ್ತ ಹೊರಟಿದ್ದರು. ಆದರೆ ಅಂಪಾಯರ್ ಅವರನ್ನು ತಡೆದರು.
ಯಾಕೆಂದರೆ ಅದು ನೋ ಬಾಲ್ ಆಗಿತ್ತು. ಹೀಗಾಗಿ ರಾಹುಲ್ ಗೆ ಜೀವದಾನ ಸಿಕ್ಕಿತ್ತು. ವಿಶೇಷವೆಂದರೆ ರಿಪ್ಲೇನಲ್ಲಿ ನೋಡಿದಾಗ ಚೆಂಡು ಬ್ಯಾಟ್ ಗೂ ತಾಕಿರಲಿಲ್ಲ. ಒಂದು ವೇಳೆ ನೋ ಬಾಲ್ ತೀರ್ಪು ನೀಡದೇ ಇದ್ದಿದ್ದರೆ ರಾಹುಲ್ ಅನ್ಯಾಯವಾಗಿ ಖಾತೆ ತೆರೆಯುವ ಮೊದಲೇ ಔಟಾಗುತ್ತಿದ್ದರು. ಆದರೆ ಇದೀಗ 34 ರನ್ ಗಳಿಸಿ ಔಟಾಗಿದ್ದಾರೆ. ಇತ್ತ ಭಾರತ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 82 ರನ್ ಗಳಿಸಿದೆ.