ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಇದಕ್ಕೆ ರಾಹುಲ್ ಕೊಟ್ಟ ಉತ್ತರ ಮಾತ್ರ ನಿಮಗೆ ನಗೆ ಉಕ್ಕಿಸುತ್ತದೆ.
ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಈಗ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಅವರನ್ನು ಯಾವ ಸ್ಥಾನದಲ್ಲಿ ಕಣಕ್ಕಿಳಿಸುವುದು ಎಂಬುದೇ ಚಿಂತೆಯ ವಿಷಯವಾಗಿದೆ.
ಎರಡನೇ ಪಂದ್ಯಕ್ಕೆ ರೋಹಿತ್ ವಾಪಸಾಗಿರುವುದರಿಂದ ರಾಹುಲ್ ಕೆಳ ಕ್ರಮಾಂಕದಲ್ಲಿ ಆಡಬಹುದೇ ಅಥವಾ ಓಪನರ್ ಆಗಿಯೇ ಮುಂದುವರಿಯುತ್ತಾರಾ ಎಂಬ ಅನುಮಾನಗಳು ಎಲ್ಲರಲ್ಲಿದೆ. ಇದಕ್ಕೆ ಇಂದು ಮಾಧ್ಯಮಗೋಷ್ಠಿಯಲ್ಲಿ ಕೆಎಲ್ ರಾಹುಲ್ ತಮಾಷೆಯಾಗಿ ಉತ್ತರಿಸಿದ್ದಾರೆ.
ಮಾಧ್ಯಮಪ್ರತಿನಿಧಿಗಳು ನೀವು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ರಾಹುಲ್, ನನಗೆ ಯಾವ ಕ್ರಮಾಂಕದಲ್ಲಿ ಆಡಬೇಕು ಎಂದು ಮ್ಯಾನೇಜ್ ಮೆಂಟ್ ಹೇಳಿದೆ, ಆದರೆ ಅದನ್ನು ನಿಮಗೆ ಹೇಳಬಾರದು ಎಂದೂ ಹೇಳಿದ್ದಾರೆ ಎಂದಾಗ ಅಲ್ಲಿದ್ದವರಿಗೆ ನಗುವೋ ನಗು. ಬಳಿಕ ಮುಂದುವರಿದ ರಾಹುಲ್ ಯಾವ ಕ್ರಮಾಂಕವಾದರೂ ಓಕೆ. ನನಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕುವುದಷ್ಟೇ ಮುಖ್ಯ ಎಂದಿದ್ದಾರೆ.