ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಗೆ ಮುನ್ನ ಅಧ್ಯಕ್ಷರ ಬಳಗದ ಜೊತೆ ಎರಡು ದಿನಗಳ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಇದರಿಂದ ಟೀಂ ಇಂಡಿಯಾಕ್ಕೆ ಸಂಕಷ್ಟ ಎದುರಾಗಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಬುಮ್ರಾ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ರೋಹಿತ್, ಶುಬ್ಮನ ಗಿಲ್ ಗೈರಾಗಿದ್ದರು. ಇದರ ಜೊತೆಗೆ ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು.
ಆದರೆ ಈಗ ಅಡಿಲೇಡ್ ಟೆಸ್ಟ್ ಗೆ ಮುನ್ನ ತಂಡದ ಕಾಂಬಿನೇಷನ್ ಪರೀಕ್ಷಿಸಲು ಈ ಅಭ್ಯಾಸ ಪಂದ್ಯಕ್ಕೆ ತಂಡಕ್ಕೆ ಅಗತ್ಯವಾಗಿತ್ತು. ಆದರೆ ಈಗ ಅಭ್ಯಾಸ ಪಂದ್ಯದ ಮೊದಲ ದಿನವೇ ಮಳೆಯಿಂದಾಗಿ ಕೊಚ್ಚಿಹೋಗಿದೆ. ಇಂದು ಅಭ್ಯಾಸ ಪಂದ್ಯದ ಮೊದಲ ದಿನವಾಗಿತ್ತು. ಆದರೆ ಟಾಸ್ ಕೂಡಾ ನಡೆಸಲಾಗಲಿಲ್ಲ.
ಸದ್ಯದ ಪರಿಸ್ಥಿತಿ ನೋಡಿದರೆ ನಾಳೆಯೂ ಪಂದ್ಯ ನಡೆಯುವುದು ಅನುಮಾನ ಎನ್ನುವ ಸ್ಥಿತಿಯಿದೆ. ಹೀಗಾದಲ್ಲಿ ತಂಡದ ಕಾಂಬಿನೇಷ್ ಬಗ್ಗೆ ನಿರ್ಧರಿಸಲು ಈಗ ತಂಡಕ್ಕೆ ಸಮಯವೇ ಇಲ್ಲದಂತಾಗಿದೆ. ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ತಂಡದ ಆಡುವ ಬಳಗ ಹೇಗಿರಲಿದೆ ಎಂಬುದು ಈಗ ಎಲ್ಲರ ಕುತೂಹಲವಾಗಿದೆ.