ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಫಿದಾ ಆಗಿದ್ದಾಗಿ ನಾಯಕ ರೋಹಿತ್ ಶರ್ಮಾ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ರೋಹಿತ್ ಪತ್ನಿಯ ಎರಡನೇ ಹೆರಿಗೆ ನಿಮಿತ್ತ ಆಡಿರಲಿಲ್ಲ. ಆಗಷ್ಟೇ ರೋಹಿತ್ ಗೆ ಗಂಡು ಮಗುವಾಗಿತ್ತು. ಇದೀಗ ಎರಡನೇ ಪಂದ್ಯಕ್ಕೆ ಅವರು ತಂಡಕ್ಕೆ ಮರಳಿದ್ದಾರೆ. ಆದರೆ ಎರಡನೇ ಪಂದ್ಯದಲ್ಲೂ ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಡರ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ನನ್ನ ಮಗನನ್ನು ಕೈಯಲ್ಲಿ ಹಿಡಿದುಕೊಂಡು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವುದನ್ನು ಮನೆಯಲ್ಲಿ ನೋಡುತ್ತಿದ್ದೆ. ನಿಜಕ್ಕೂ ಕೆಎಲ್ ಅದ್ಭುತವಾಗಿ ಆಡಿದ್ದರು. ಹೀಗಾಗಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವ ಅಗತ್ಯವಿಲ್ಲ. ಅವರು ಆ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.
ಆ ಮೂಲಕ ತಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಖಚಿತಪಡಿಸಿದ್ದಾರೆ. ಏನೇ ಆದರೂ ನಮಗೆ ತಂಡಕ್ಕೆ ಯಾವುದು ಉತ್ತಮ ಎಂಬುದು ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ ನೋಡಿದರೆ ಕೆಎಲ್ ಓಪನರ್ ಆಗುವುದೇ ಸೂಕ್ತ ಎನಿಸುತ್ತದೆ. ಹೀಗಾಗಿ ಅವರನ್ನು ಬದಲಾಯಿಸುವ ಉದ್ದೇಶವಿಲ್ಲ ಎಂದಿದ್ದಾರೆ.