ಅಡಿಲೇಡ್: ಹಿಟ್ ಮ್ಯಾನ್ ರೋಹಿತ್ ಶರ್ಮಾ ಎಂದರೆ ಓಪನರ್ ಆಗಿಯೇ ಹೆಸರು ವಾಸಿ. ಆದರೆ ಈಗ ಕೆಎಲ್ ರಾಹುಲ್ ಗಾಗಿ ಅವರು ತ್ಯಾಗರಾಜನಾಗಲು ಹೊರಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಓಪನರ್ ಆಗಿ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಈಗ ಎರಡನೇ ಟೆಸ್ಟ್ ಗೆ ರೋಹಿತ್ ಪುನರಾಗಮನ ಮಾಡಿದ್ದಾರೆ. ಆದರೆ ರಾಹುಲ್-ಯಶಸ್ವೀ ಜೈಸ್ವಾಲ್ ಅವರ ಯಶಸ್ವೀ ಓಪನಿಂಗ್ ಜೋಡಿಯನ್ನು ಕಿತ್ತು ಹಾಕಲು ರೋಹಿತ್ ಗೂ ಮನಸ್ಸಿಲ್ಲ.
ಹೀಗಾಗಿ ಈಗ ರಾಹುಲ್ ಗಾಗಿ ರೋಹಿತ್ ತಮ್ಮ ಓಪನಿಂಗ್ ಸ್ಥಾನವನ್ನೇ ಬಿಟ್ಟುಕೊಡಲು ರೆಡಿಯಾಗಿದ್ದಾರೆ. ಅತ್ತ ಜೈಸ್ವಾಲ್ ಕೂಡಾ ಟೆಸ್ಟ್ ಕ್ರಿಕೆಟ್ ನಲ್ಲಿ ಓಪನರ್ ಆಗಿ ಅದ್ಭುತ ಯಶಸ್ಸು ಕಂಡಿದ್ದಾರೆ. ಹೀಗಾಗಿ ಇಬ್ಬರನ್ನೂ ಕಿತ್ತು ಹಾಕಬಾರದೆಂಬ ಕಾರಣಕ್ಕೆ ರೋಹಿತ್ ತಾವೇ ಓಪನರ್ ಸ್ಥಾನ ಬಿಟ್ಟುಕೊಡಲಿದ್ದಾರೆ.
ಅಸಲಿಗೆ ರೋಹಿತ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಕೆಳ ಕ್ರಮಾಂಕ ಬ್ಯಾಟಿಗನಾಗಿ. ಆದರೆ ಕ್ರಮೇಣ ಅವರು ಓಪನರ್ ಆಗಿ ಬಡ್ತಿ ಪಡೆದರು. ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಓಪನರ್ ಆಗಿ ಸಕ್ಸಸ್ ಆದ ಬಳಿಕ ರೋಹಿತ್ ಖಾಯಂ ಓಪನರ್ ಆಗಿದ್ದರು. ಈಗ ಮತ್ತೆ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಲಿದ್ದಾರೆ.