ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನತ್ತ ಮುಖ ಮಾಡಿದೆ. ಬ್ಯಾಟರ್ ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ.
ಯಾಕೋ ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟಿಗರು ಬ್ಯಾಟಿಂಗ್ ನ್ನೇ ಮರೆತಂತಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 180 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 337 ರನ್ ಗೆ ಆಲೌಟ್ ಆಗಿತ್ತು.
157 ರನ್ ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಎರಡನೇ ದಿನದಂತ್ಯಕ್ಕೆ 128 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಗಿಲ್, ಕೊಹ್ಲಿ, ರೋಹಿತ್ ರಂತಹ ಪ್ರಮುಖ ವಿಕೆಟ್ ಗಳೇ ಉರುಳಿದ್ದು ತಂಡ ಸೋಲಿನತ್ತ ಮುಖ ಮಾಡಿದೆ.
ಭಾರತಕ್ಕೆ ಇನ್ನೂ ಮೊದಲ ಇನಿಂಗ್ಸ್ ಹಿನ್ನಡೆ ದಾಟಲು 29 ರನ್ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಮೊತ್ತ ದಾಟಿ ಎದುರಾಳಿಗೆ ಗೆಲುವಿನ ಗುರಿ ಹಾಕಿಕೊಡುವಂತಹ ಪರಿಸ್ಥಿತಿಯಲ್ಲಿ ತಂಡವಿಲ್ಲ. ಮೊದಲ ಇನಿಂಗ್ಸ್ ಉತ್ತಮ ಇನಿಂಗ್ಸ್ ಆಡಿದ್ದ ನಿತೀಶ್ ಕುಮಾರ್ ರೆಡ್ಡಿ 15 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರಿಗೆ 28 ರನ್ ಗಳಿಸಿರುವ ರಿಷಭ್ ಪಂತ್ ಸಾಥ್ ನೀಡುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮೊದಲ ಇನಿಂಗ್ಸ್ ನಲ್ಲಿ ಕೈ ಕೊಟ್ಟಿದ್ದರೂ ಎರಡನೇ ಇನಿಂಗ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಎರಡೂ ಇನಿಂಗ್ಸ್ ನಲ್ಲಿ ಕಳಪೆ ನಿರ್ವಹಣೆ ತೋರಿದ್ದಾರೆ. ಕೆಎಲ್ ರಾಹುಲ್ ಗಾಗಿ ನಾಯಕ ರೋಹಿತ್ ಓಪನಿಂಗ್ ಸ್ಥಾನ ಬಿಟ್ಟುಕೊಟ್ಟಿದ್ದು ಲಾಭವಾಗಿಲ್ಲ. ರೋಹಿತ್ ಮತ್ತೊಮ್ಮೆ ವಿಫಲರಾಗಿದ್ದಾರೆ. ಇದರೊಂದಿಗೆ ಅವರ ನಾಯಕತ್ವದ ಬಗ್ಗೆಯೂ ಪ್ರಶ್ನೆ ಕೇಳಿಬಂದಿದೆ. ಇದಕ್ಕಿಂತ ಬುಮ್ರಾ ನಾಯಕರಾಗಿದ್ದರೇ ಚೆನ್ನಾಗಿರುತ್ತಿತ್ತು ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.