ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ಆಸೀಸ್ ಬ್ಯಾಟಿಗ ಟ್ರಾವಿಸ್ ಹೆಡ್ ಮತ್ತು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಡುವಿನ ಆಕ್ರಮಣಕಾರೀ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿನ್ನೆಯ ದಿನದಾಟದಲ್ಲಿ ಟ್ರಾವಿಸ್ ಹೆಡ್ ರನ್ನು ಬೌಲ್ಡ್ ಔಟ್ ಮಾಡಿದ್ದ ಸಿರಾಜ್ ಸೆಂಡ್ ಆಫ್ ನೀಡಿದ್ದರು. ಇದಕ್ಕೆ ಟ್ರಾವಿಸ್ ಕೂಡಾ ನಿಂದಿಸುತ್ತಾ ಪೆವಿಲಿಯನ್ ಗೆ ಹೆಜ್ಜೆ ಹಾಕಿದ್ದಾರೆ. ಸಿರಾಜ್ ಕೂಡಾ ಟ್ರಾವಿಸ್ ರತ್ತ ದಿಟ್ಟಿಸಿ ನೋಡಿ ತಿರುಗೇಟು ಕೊಟ್ಟಿದ್ದಾರೆ. ಇಬ್ಬರ ನಡುವಿನ ವಾಗ್ಯುದ್ಧ ಈಗ ಚರ್ಚೆಗೆ ಕಾರಣವಾಗಿದೆ.
ಸಿರಾಜ್ ವರ್ತನೆಗೆ ಕಿಡಿ ಕಾರಿದ್ದ ಸುನಿಲ್ ಗವಾಸ್ಕರ್, 140 ರನ್ ಗಳ ಬೃಹತ್ ಇನಿಂಗ್ಸ್ ಆಡಿದ ವ್ಯಕ್ತಿಗೆ ಈ ರೀತಿ ಸೆಂಡ್ ಆಫ್ ಅಗತ್ಯವೇ ಇರಲಿಲ್ಲ. ಆತ ಕೇವಲ 4 ಅಥವಾ 5 ರನ್ ಗೆ ಔಟಾಗಿದ್ದಲ್ಲ. ನನ್ನ ಕೇಳಿದರೆ ಇದು ಅನಗತ್ಯ ವರ್ತನೆಯಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದರು.
ಆದರೆ ನೆಟ್ಟಿಗರು ಸಿರಾಜ್ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವರ್ತನೆಯನ್ನು ಆಸ್ಟ್ರೇಲಿಯಾದವರು ತೋರಿದರೆ ಅದನ್ನು ಅಗ್ರೆಷನ್ ಎನ್ನುತ್ತೀರಿ. ಆದರೆ ಭಾರತೀಯರು ಮಾಡಿದರೆ ಅದು ದುರ್ವರ್ತನೆಯಾಗುತ್ತದಾ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಗೆ ಕಿಚ್ಚು ಹಚ್ಚಲು ಇಂತಹ ಕೆಲವು ವಿಚಾರಗಳು ಮೈದಾನದಲ್ಲಿ ನಡೆಯಬೇಕು ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.