ಸೋಲಿನಲ್ಲೂ ಸೂರ್ಯನಂತೆ ಹೊಳೆದ ರೋಹಿತ್ ಶರ್ಮಾ

ಶನಿವಾರ, 12 ಜನವರಿ 2019 (16:16 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಅತಿಥೇಯ ಆಸೀಸ್ 34 ರನ್ ಗಳಿಂದ ಗೆದ್ದುಕೊಂಡಿದೆ.


ಭಾರತ ಚೇಸಿಂಗ್ ಮಾಡಿದ್ದ ಪರಿ ನೋಡಿದರೆ ಇಷ್ಟು ಕಡಿಮೆ ಅಂತರದಲ್ಲಿ ಸೋತಿದ್ದೇ ಪವಾಡ. ಆಸೀಸ್ ನೀಡಿದ 289 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಕ್ಕೆ ಶಿಖರ್ ಧವನ್ ಮೊದಲ ಬಾಲ್ ನಲ್ಲೇ ಔಟಾಗುವ ಮೂಲಕ ಆಘಾತ ನೀಡಿದರು.

ಅದಾದ ಬಳಿಕ ರನ್ ಗಳಿಂದ ಹೆಚ್ಚು ವಿಕೆಟ್ ಗಳೇ ಉದುರಿ ತಂಡದ ಆತಂಕ ಹೆಚ್ಚಿತು. ಧವನ್ ಹಿಂದೆಯೇ ಅಂಬಟಿ ರಾಯುಡು (0), ವಿರಾಟ್ ಕೊಹ್ಲಿ (3 ರನ್) ಔಟಾದಾಗ ಹೀನಾಯ ಸೋಲೇ ಗತಿ ಎನ್ನುವಂತಾಗಿತ್ತು.

ಆದರೆ ಈ ಹಂತದಲ್ಲಿ ರೋಹಿತ್ ಶರ್ಮಾ ಜತೆಯಾದ ಧೋನಿ 137 ರನ್ ಗಳ ಜತೆಯಾಟವಾಡಿ ಭಾರತದ ಮಾನ ಉಳಿಸಿದರು. ಇಲ್ಲದಿದ್ದರೆ ಟೆಸ್ಟ್ ನಲ್ಲಿ ಗಳಿಸಿದ್ದ ಮಾನ ಏಕದಿನದಲ್ಲಿ ಹರಾಜಾಗುತ್ತಿತ್ತು. ರೋಹಿತ್ ಶರ್ಮಾ ಸೋಲಿನ ನಡುವೆಯೂ ಕೆಚ್ಚೆದೆಯ ಆಟವಾಡಿ 129 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಸಹಿತ 133 ರನ್ ಸಿಡಿಸಿ ಎಂದಿನ ಹಿಟ್ ಮ್ಯಾನ್ ಶೈಲಿಯ ಶತಕ ಸಿಡಿಸಿದರು. ಇವರಿಗೆ ಜತೆಯಾದ ಧೋನಿ 96 ಎಸೆತಗಳಲ್ಲಿ 51 ರನ್ ಗಳಿಸಿದರು. ಇವರು ಔಟಾದ ಬಳಿಕ ಭಾರತದ ಹೋರಾಟವೂ ಅಂತ್ಯಗೊಂಡಿತು. ಅಂತಿಮವಾಗಿ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 254 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಪಿನ್ನರ್ ಗಳ ಪ್ರಯತ್ನವನ್ನು ನೀರಲ್ಲಿನ ಹೋಮ ಮಾಡಿದ ಟೀಂ ಇಂಡಿಯಾ ವೇಗಿಗಳು