ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್ ಮತ್ತು ಬಿಸಿಸಿಐ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇಶಾನ್ ಕಿಶನ್ ರನ್ನು ಮತ್ತೆ ಕಡೆಗಣಿಸಲಾಗಿದೆ.
ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಇಶಾನ್ ಮಾನಸಿಕವಾಗಿ ಸುಸ್ತಾಗಿದೆ ಎಂಬ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಆದರೆ ಬಳಿಕ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದು ಬಿಸಿಸಿಐ ಹುಬ್ಬೇರಿತ್ತು. ಇದೇ ಕಾರಣಕ್ಕೆ ಅವರನ್ನು ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಹಾಗಿದ್ದರೂ ಶಿಸ್ತು ಉಲ್ಲಂಘನೆ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಕಾರಣವಲ್ಲ ಎಂದು ಕೋಚ್ ದ್ರಾವಿಡ್ ಸ್ಪಷ್ಟನೆ ನೀಡಿದ್ದರು. ಹಾಗಿದ್ದರೂ ಮತ್ತೆ ತಂಡಕ್ಕೆ ಬರಲು ರಣಜಿ ಟ್ರೋಫಿಯಲ್ಲಿ ಆಡಿ ಸಾಮರ್ಥ್ಯ ಸಾಬೀತುಪಡಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಆದರೆ ಇಶಾನ್ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು. ಜಾರ್ಖಂಡ್ ಪರ ರಣಜಿಯಲ್ಲಿ ಆಡದೇ ಸೂಚನೆ ಉಲ್ಲಂಘಿಸಿದ್ದರು. ಇದು ಮತ್ತಷ್ಟು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ.
ಅಷ್ಟಕ್ಕೂ ಇಶಾನ್ ಕೋಚ್ ಸೂಚನೆಯನ್ನೂ ಪಾಲಿಸದೇ ಇರಲು ಕಾರಣವೇನು ಎಂಬುದಕ್ಕೆ ಉತ್ತರವೊಂದು ಸಿಕ್ಕಿದೆ. ಕಳೆದ ಏಕದಿನ ವಿಶ್ವಕಪ್ ನಲ್ಲಿ ಇಶಾನ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಇಷ್ಟವಿಲ್ಲದಿದ್ದರೂ ಆಯ್ಕೆ ಮಾಡಲಾಗಿತ್ತು. ಇದು ಅವರ ಮುನಿಸಿಗೆ ಕಾರಣವೆನ್ನಲಾಗಿದೆ. ಆದರೆ ಈ ಮುಸುಕಿನ ಗುದ್ದಾಟ ಅವರ ವೃತ್ತಿ ಜೀವನಕ್ಕೇ ಮುಳುವಾಗುವ ಅಪಾಯವಿದೆ.