ಸಿಡ್ನಿ: ಇತ್ತೀಚೆಗಷ್ಟೇ ನಡೆದ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಕ್ಯುರೇನ್ ಇದೀಗ ನಿಷೇಧಕ್ಕೊಳಗಾಗಿದ್ದಾರೆ.
ಬಿಗ್ ಬಾಶ್ ಲೀಗ್ ಪಂದ್ಯಾವಳಿಯಲ್ಲಿ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದಿದ್ದ ಟಾಮ್ ಕ್ಯುರೇನ್ ಗೆ ಆಸ್ಟ್ರೇಲಿಯಾ ಕ್ರಿಕೆಟ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.
ಪ್ರಾಕ್ಟೀಸ್ ವೇಳೆ ಪಂದ್ಯ ನಡೆಯುವ ಪಿಚ್ ಮೇಲೆ ನಡೆದಾಡಿದ್ದಕ್ಕೆ ಅಂಪಾಯರ್ ಎಚ್ಚರಿಕೆ ನೀಡಿದರು. ಆದರೆ ಕ್ಯುರೇನ್ ಅಂಪಾಯರ್ ಜೊತೆ ವಾಗ್ವಾದ ಮಾಡಿದ್ದಲ್ಲದೆ, ಬೇಕೆಂದೇ ರನ್ ಅಪ್ ಮಾಡುವಂತೆ ಮಾಡಿ ಮೈಮೇಲೇ ಬೀಳಲು ಹೊರಟಿದ್ದರು. ಅವರ ಈ ಅನುಚಿತ ವರ್ತನೆಗೆ ತಕ್ಕ ಶಿಕ್ಷೆ ವಿಧಿಸಲಾಗಿದೆ.
ಕ್ಯುರೇನ್ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡುತ್ತಿದ್ದರು. ಹೋಬರ್ಟ್ ಹುರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಐಪಿಎಲ್ ನಲ್ಲಿ ಭಾರೀ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಕರಿಯಾದ ಬೆನ್ನಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ.