Publish Date: Tue, 06 Feb 2024 (09:18 IST)
Updated Date: Tue, 06 Feb 2024 (09:25 IST)
ವಿಶಾಖಪಟ್ಟಣಂ: ತಮ್ಮ ಸೂಚನೆ ಉಲ್ಲಂಘಿಸಿ ರಣಜಿ ಟ್ರೋಫಿ ಪಂದ್ಯಾವಳಿ ತಪ್ಪಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಖಡಕ್ ಸಂದೇಶ ಕೊಟ್ಟಿದ್ದಾರೆ.
ದ.ಆಫ್ರಿಕಾ ಸರಣಿಯಿಂದ ಹಿಂದೆ ಸರಿದು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಇಶಾನ್ ಕಿಶನ್ ಮೇಲೆ ಬಿಸಿಸಿಐ ಗರಂ ಆಗಿತ್ತು. ಇದಾದ ಬಳಿಕ ಕೋಚ್ ದ್ರಾವಿಡ್ ಮರಳಿ ತಂಡಕ್ಕೆ ಸೇರ್ಪಡೆಯಾಗಬೇಕಾದರೆ ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಿ ಎಂದಿದ್ದರು. ನೇರವಾಗಿ ಸಂದೇಶ ನೀಡಿದರೂ ಇಶಾನ್ ತಮ್ಮ ತವರು ಜಾರ್ಖಂಡ್ ಪರ ಒಂದೇ ಒಂದು ಪಂದ್ಯವಾಡಿಲ್ಲ.
ರಣಜಿ ತಪ್ಪಿಸಿಕೊಂಡ ಇಶಾನ್ ಮೇಲೆ ದ್ರಾವಿಡ್ ಗರಂ
ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ರಾಹುಲ್ ದ್ರಾವಿಡ್ ಗೆ ಇಶಾನ್ ಕಿಶನ್ ಕುರಿತು ಪ್ರಶ್ನೆ ಕೇಳಲಾಯಿತು. ಇಶಾನ್ ಕಿಶನ್ ವಾಪಸಾತಿ ಯಾವಾಗ ಎಂಬ ಪ್ರಶ್ನೆಗೆ ದ್ರಾವಿಡ್ ಖಡಕ್ ಸಂದೇಶ ಕೊಟ್ಟಿದ್ದಾರೆ. ವಿಶ್ರಾಂತಿಯಲ್ಲಿರುವ ಇಶಾನ್ ಮತ್ತೆ ದೇಶೀಯ ಕ್ರಿಕೆಟ್ ನಲ್ಲಿ ಆಡಬೇಕು. ಆ ನಂತರವೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲಾಗುತ್ತದೆ ಎಂದು ನೇರವಾಗಿ ಹೇಳಿದ್ದಾರೆ.
ಟೀಂ ಇಂಡಿಯಾ ಜೊತೆ ಇಶಾನ್ ಸಂಪರ್ಕದಲ್ಲಿದ್ದಾರೆ. ಅವರ ಕೋರಿಕೆಯಂತೆ ರಜೆ ಮಂಜೂರು ಮಾಡಲಾಗಿತ್ತು. ಆದರೆ ಈಗ ತಂಡಕ್ಕೆ ಮರಳಬೇಕಾದರೆ ದೇಶೀಯ ಕ್ರಿಕೆಟ್ ನಲ್ಲಿ ಆಡಬೇಕಾಗುತ್ತದೆ ಎಂದಿದ್ದಾರೆ. ಆದರೆ ಇಶಾನ್ ಇನ್ನೂ ದೇಶೀಯ ಕ್ರಿಕೆಟ್ ಆಡಿಲ್ಲ. ಅವರು ಇನ್ನೂ ವಿಶ್ರಾಂತಿಯಲ್ಲಿದ್ದಾರೆ. ಇಶಾನ್ ತಾನು ಯಾವಾಗ ಆಡಲು ಸಿದ್ಧ ಎಂದು ತೀರ್ಮಾನಿಸಬೇಕು ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ಆಡಿದ್ದರು. ಆದರೆ ಅವರು ಬ್ಯಾಟಿಂಗ್ ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಅಲ್ಲದೆ ಕೀಪಿಂಗ್ ನಲ್ಲೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಹೀಗಾಗಿ ಫ್ಯಾನ್ಸ್ ಇಶಾನ್ ಕಿಶನ್ ರನ್ನು ನೆನೆಸಿಕೊಂಡಿದ್ದರು.