ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಆರ್ ಸಿಬಿ ಸಹ ಕ್ರಿಕೆಟಿಗ, ಸ್ನೇಹಿತ ಎಬಿಡಿ ವಿಲಿಯರ್ಸ್ ಬಾಯ್ಬಿಟ್ಟಿದ್ದಾರೆ.
ಇದುವರೆಗೆ ಕೊಹ್ಲಿ ದಂಪತಿ ಎಲ್ಲೂ ಈ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಆದಷ್ಟು ತಮ್ಮ ಕೌಟುಂಬಿಕ ವಿಚಾರವನ್ನು ಕೊಹ್ಲಿ ಮಾಧ್ಯಮಗಳಿಂದ ಗುಟ್ಟಾಗಿಯೇ ಇಟ್ಟಿದ್ದರು. ಹಾಗಿದ್ದರೂ ಇತ್ತೀಚೆಗೆ ಕೊಹ್ಲಿ ಪದೇ ಪದೇ ಕೌಟುಂಬಿಕ ಕಾರಣ ನೀಡಿ ಕ್ರಿಕೆಟ್ ಪಂದ್ಯಗಳಿಂದ ಹೊರಗುಳಿಯುತ್ತಿರುವುದು ನೋಡಿದರೆ ಅನುಷ್ಕಾ ಗರ್ಭಿಣಿ ಎನ್ನುವ ಅನುಮಾನಗಳು ದಟ್ಟವಾಗಿತ್ತು. ಈ ನಡುವೆ ಈಗ ಎಬಿಡಿ ವಿಲಿಯರ್ಸ್ ಆ ಗುಟ್ಟನ್ನು ಮೊದಲ ಬಾರಿಗೆ ಅಧಿಕೃತವಾಗಿಸಿದ್ದಾರೆ.
ಕೊಹ್ಲಿ ಬಚ್ಚಿಟ್ಟಿದ್ದ ಗುಟ್ಟು ರಟ್ಟು ಮಾಡಿದ ಎಬಿಡಿ
ಎಬಿಡಿ ವಿಲಿಯರ್ಸ್ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಕೊಹ್ಲಿ ಇತ್ತೀಚೆಗೆ ಪದೇ ಪದೇ ಪಂದ್ಯಗಳಿಂದ ಹೊರಗುಳಿಯುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯಲು ಅವರು ಕ್ರಿಕೆಟ್ ನಿಂದ ದೂರವಿದ್ದಾರೆ ಎಂದು ಎಬಿಡಿ ಬಾಯ್ಬಿಟ್ಟಿದ್ದಾರೆ. ಆದರೆ ಇದುವರೆಗೆ ಕೊಹ್ಲಿ ಇದನ್ನು ರಹಸ್ಯವಾಗಿಟ್ಟಿದ್ದು, ಸ್ನೇಹಿತನ ಬಾಯಿಂದಲೇ ಸತ್ಯ ಹೊರಗೆ ಬಂದಿದ್ದು ನೋಡಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ಮೆಮೆಗಳು ಹರಿದಾಡಿದೆ. ಸ್ನೇಹಿತನಾಗಿ ಗುಟ್ಟು ಉಳಿಸಿಕೊಳ್ಳಲಿಲ್ಲ ಎಂದು ಎಬಿಡಿಯನ್ನು ತಮಾಷೆ ಮಾಡಿದ್ದಾರೆ.
ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಕೊಹ್ಲಿ ಹೊರಗುಳಿದಿದ್ದಾರೆ. ಮುಂದಿನ ಟೆಸ್ಟ್ ಪಂದ್ಯಕ್ಕೆ ಅವರು ಗೈರಾಗುವುದು ಬಹುತೇಕ ಖಚಿತವಾಗಿದೆ.