ಮುಂಬೈ: ಟೀಂ ಇಂಡಿಯಾ ಕಿಂಗ್ ಕೊಹ್ಲಿ ಮೈದಾನದಲ್ಲಿ ಎಂತಹ ಆಟಗಾರನಿಗಾದರೂ ಮುಖಕ್ಕೆ ಹೊಡೆದ ಹಾಗೆ ಸ್ಲೆಡ್ಜ್ ಮಾಡುವುದರಲ್ಲಿ ಫೇಮಸ್. ಅವರ ಆಕ್ರಮಣಕಾರೀ ವರ್ತನೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅವರು ಯಾವತ್ತೂ ಎದುರಾಳಿಗೆ ತಲೆಬಾಗಿದವರಲ್ಲ.
ಆದರೆ ವಿರಾಟ್ ಕೊಹ್ಲಿ ತನ್ನ ಜೊತೆ ಕಿತ್ತಾಡಿದ್ದರು. ಬಳಿಕ ಎಬಿಡಿ ವಿಲಿಯರ್ಸ್ ಬೈದಿದ್ದಕ್ಕೆ ನನ್ನ ಬಳಿ ಬಂದು ಕ್ಷಮೆ ಕೇಳಿದರು ಎಂದು ದ.ಆಫ್ರಿಕಾ ಕ್ರಿಕೆಟಿಗ ಡೀನ್ ಎಲ್ಗರ್ ಹೇಳಿಕೊಂಡಿದ್ದಾರೆ. ಆದರೆ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.
ಇತ್ತೀಚೆಗಷ್ಟೇ ಡೀನ್ ಎಲ್ಗರ್ ಭಾರತದ ವಿರುದ್ಧದ ಟೆಸ್ಟ್ ಸರಣಿ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಭಾರತದ ವಿರುದ್ಧದ ಟೆಸ್ಟ್ ಪಂದ್ಯ ಅವರ ಕೊನೆಯ ಪಂದ್ಯವಾಗಿತ್ತು. ಈ ವೇಳೆ ಸ್ವತಃ ಕೊಹ್ಲಿ ಅವರಿಗೆ ತಮ್ಮ ಸಹಿ ಹಾಕಿದ ಜೆರ್ಸಿ ನೀಡಿ ಬೀಳ್ಕೊಟ್ಟಿದ್ದರು.
ಡೀನ್ ಎಲ್ಗರ್ ಹೇಳಿದ ಕೊಹ್ಲಿ ಕ್ಷಮೆ ಯಾಚನೆ ಕತೆ
ಇದೀಗ ಕೆಲವು ವರ್ಷದ ಮೊದಲು ಕೊಹ್ಲಿ ತನ್ನ ಜೊತೆ ಕಿತ್ತಾಡಿದ ವಿಚಾರ ಹೇಳಿದ್ದಾರೆ. 2015 ರಲ್ಲಿ ದ.ಆಫ್ರಿಕಾ ಭಾರತ ಪ್ರವಾಸ ಮಾಡಿದ್ದಾಗ ಟೆಸ್ಟ್ ಪಂದ್ಯವೊಂದರ ವೇಳೆ ಕೊಹ್ಲಿ ನಾನು ಬ್ಯಾಟ್ ಮಾಡಲು ಬಂದಾಗ ಜಗಳಕ್ಕಿಳಿದವರು. ಅವರಿಗೆ ನನ್ನ ಜೊತೆ ಮಾತಿನ ಚಕಮಕಿ ನಡೆಸಲು ಇಷ್ಟ. ಆಗ ನಾನು ನೀನು ಹೀಗೆ ಮಾತನಾಡುತ್ತಿದ್ದರೆ ಈ ಬ್ಯಾಟ್ ನಿಂದ ಹೊಡೆಯಬೇಕಾಗುತ್ತದೆ ಎಂದಿದ್ದೆ. ಅವರಿಗೆ ನಾನು ಹೇಳಿದ ಕೆಟ್ಟ ಶಬ್ಧ ಅರ್ಥವಾಗಿತ್ತು. ಯಾಕೆಂದರೆ ಅವರು ಎಬಿಡಿ ವಿಲಿಯರ್ಸ್ ಜೊತೆ ಐಪಿಎಲ್ ನಲ್ಲಿ ಆರ್ ಸಿಬಿ ಪರ ಜೊತೆಯಾಗಿ ಆಡುತ್ತಾರೆ. ಹೀಗಾಗಿ ಆ ಶಬ್ಧದ ಅರ್ಥ ಅವರಿಗೆ ಗೊತ್ತಿತ್ತು.
ಈ ವಿಚಾರ ಎಬಿಡಿ ವಿಲಿಯರ್ಸ್ ಗೆ ಗೊತ್ತಾಗಿತ್ತು. ಅವರು ಕೊಹ್ಲಿ ಬಳಿ ಹೋಗಿ ನೀವು ಯಾಕೆ ನನ್ನ ಸಹ ಆಟಗಾರನ ಬಗ್ಗೆ ಕೆಟ್ಟದಾಗಿ ಮಾತನಾಡಿದೆ? ಎಂದು ಪ್ರಶ್ನಿಸಿದರು. ಎರಡು ವರ್ಷದ ಬಳಿಕ ಒಮ್ಮೆ ಟೆಸ್ಟ್ ಪಂದ್ಯದ ವೇಳೆ ನನ್ನನ್ನು ಕರೆದು ಕೊಹ್ಲಿ ನಾವು ಈ ಸರಣಿ ಮುಗಿದ ಬಳಿಕ ಜೊತೆಯಾಗಿ ಡ್ರಿಂಕ್ಸ್ ಗೆ ಹೋಗೋಣವೇ? ನಾನು ನಿಮ್ಮ ಬಳಿ ಅಂದಿನ ವರ್ತನೆಗೆ ಕ್ಷಮೆ ಯಾಚಿಸಬೇಕು ಎಂದಿದ್ದರು. ಬಳಿಕ ನಾವು ಜೊತೆಯಾಗಿ ಹೋಗಿ ಡ್ರಿಂಕ್ಸ್ ಮಾಡಿದೆವು. ಬೆಳಗಿನ ಜಾವ 3 ಗಂಟೆಯವರೆಗೆ ಹರಟೆ ಹೊಡೆಯುತ್ತಾ, ಡ್ರಿಂಕ್ಸ್ ಮಾಡುತ್ತಾ ಕಾಲ ಕಳೆದೆವು. ಅದು ಅಂದಿನ ವಿಚಾರ. ಆದರೆ ಈಗ ಕೊಹ್ಲಿ ಕುಡಿಯಲ್ಲ. ಅವರು ತಮ್ಮ ಅಭ್ಯಾಸಗಳನ್ನು ಬದಲಾಯಿಸಿದ್ದಾರೆ.
ವಿಶೇಷವೆಂದರೆ ಕೊಹ್ಲಿ ಇತ್ತೀಚೆಗೆ ಡೀನ್ ಎಲ್ಗರ್ ಕೊನೆಯ ಪಂದ್ಯದಲ್ಲಿ ವಿಕೆಟ್ ಕಳೆದುಕೊಂಡಾಗ ಸೆಲೆಬ್ರೇಷನ್ ಮಾಡಬೇಡಿ ಎಂದು ಸಹ ಆಟಗಾರರಿಗೆ ಹೇಳಿ ಗೌರವಯುತ ವಿದಾಯ ನೀಡಿದ್ದರು.