Publish Date: Tue, 23 Jan 2024 (09:34 IST)
Updated Date: Tue, 23 Jan 2024 (09:36 IST)
ಮುಂಬೈ: ಅಯೋಧ್ಯೆಯಲ್ಲಿ ನಿನ್ನೆ ನಡೆದಿದ್ದ ಐತಿಹಾಸಿಕ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನೂ ಆಹ್ವಾನಿಸಲಾಗಿತ್ತು.
ಆದರೆ ಈ ಇಬ್ಬರೂ ಕ್ರಿಕೆಟಿಗರೂ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿಯ ಬೆಂಗಾವಲು ಪಡೆಯ ಕಾರು ಓಡಾಡುತ್ತಿದ್ದುದು ನೋಡಿ ಕೊಹ್ಲಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಇದರ ನಡುವೆಯೇ ಅವರು ಕೌಟುಂಬಿಕ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಬಹುಶಃ ಕೌಟುಂಬಿಕ ಕಾರಣಕ್ಕೇ ಕೊಹ್ಲಿ ರಾಮಮಂದಿರಕ್ಕೂ ಬಂದಿರಲಿಲ್ಲ.
ಇನ್ನು, ರೋಹಿತ್ ಶರ್ಮಾಗೆ ಆಹ್ವಾನ ಸಿಕ್ಕರೂ ಅವರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಗಾಗಿ ರೋಹಿತ್ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಬಂದಿರಲಿಲ್ಲ ಎನ್ನಲಾಗಿದೆ.
ಈ ಇಬ್ಬರು ಮಾತ್ರವಲ್ಲದೆ, ಧೋನಿಯನ್ನೂ ಆಹ್ವಾನಿಸಲಾಗಿತ್ತಾದರೂ ಅವರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕ್ರಿಕೆಟಿಗರ ಪೈಕಿ ರವೀಂದ್ರ ಜಡೇಜಾ, ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಹರ್ಭಜನ್ ಸಿಂಗ್ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.