Publish Date: Mon, 15 Nov 2021 (09:10 IST)
Updated Date: Mon, 15 Nov 2021 (09:19 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ಆಯ್ಕೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ದ್ರಾವಿಡ್ ರನ್ನು ಸ್ವತಃ ಗಂಗೂಲಿಯೇ ಮನವೊಲಿಸಿ ತಂಡದ ಕೋಚ್ ಹುದ್ದೆ ಒಪ್ಪಿಕೊಳ್ಳುವಂತೆ ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅವರನ್ನು ಕೇಳಿದಾಗ ಗಂಗೂಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ದ್ರಾವಿಡ್ ಮಕ್ಕಳು ನನಗೆ ಕರೆ ಮಾಡಿ ಅಪ್ಪ ತುಂಬಾ ಸ್ಟ್ರಿಕ್ಟ್. ಸ್ವಲ್ಪ ದಿನ ಅವರನ್ನು ಮನೆಯಿಂದ ಹೊರಗಿರುವಂತೆ ಮಾಡಿ ಎಂದು ಕಂಪ್ಲೇಂಟ್ ಮಾಡಿದ್ದರು. ಅದಕ್ಕೇ ನಾನು ದ್ರಾವಿಡ್ ಗೆ ಕರೆ ಮಾಡಿ ಕೋಚ್ ಹುದ್ದೆ ಸ್ವೀಕರಿಸುವಂತೆ ಕೇಳಿಕೊಂಡೆ ಎಂದು ತಮಾಷೆ ಮಾಡಿದ್ದಾರೆ.
ಬಳಿಕ ಗಂಭೀರವಾಗಿ ಮಾತನಾಡಿರುವ ಗಂಗೂಲಿ, ನಾವಿಬ್ಬರೂ ಜೊತೆಯಾಗಿ ಆಡಲು ಶುರು ಮಾಡಿದೆವು, ಜೊತೆಯಾಗಿ ಬೆಳೆದೆವು, ಹೆಚ್ಚು ಸಮಯ ಜೊತೆಯಾಗಿ ಕಳೆದೆವು. ಹೀಗಾಗಿ ನಮಗೆ ಅವರನ್ನು ಸ್ವಾಗತಿಸುವುದು ಸುಲಭವಾಯಿತು ಎಂದಿದ್ದಾರೆ.