ಜೈಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.
ನ್ಯೂಜಿಲೆಂಡ್ ಆರಂಭಿಕ ಡೇರಿಲ್ ಮಿಚೆಲ್ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಆದರೆ ಇನ್ನೊಬ್ಬ ಆರಂಭಿಕ ಮಾರ್ಟಿನ್ ಗುಪ್ಟಿಲ್ ಅಬ್ಬರದ ಬ್ಯಾಟಿಂಗ್ ನಡೆಸಿ 42 ಎಸೆತಗಳಿಂದ 70 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಮಾರ್ಕ್ ಚ್ಯಾಪ್ ಮ್ಯಾನ್ 63 ರನ್ ಗಳ ಕಾಣಿಕೆ ನೀಡಿದರು.
ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನೋಡಿದಾಗ ನ್ಯೂಜಿಲೆಂಡ್ 200 ರ ಗಡಿ ತಲುಪುವ ನಿರೀಕ್ಷೆಯಿತ್ತು. ಆದರೆ ಈ ನಡುವೆ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ರನ್ ಓಟಕ್ಕೆ ಕಡಿವಾಣ ಹಾಕಿದರು. ಅಂತಿಮ ಹಂತದಲ್ಲಿ ಗುಪ್ಟಿಲ್ ವಿಕೆಟ್ ನ್ನು ಚಹರ್ ಕಬಳಿಸುವುದರೊಂದಿಗೆ ಕಿವೀಸ್ ಓಟಕ್ಕೆ ಕಡಿವಾಣ ಬಿತ್ತು.